ನವದೆಹಲಿ: ಲೋಕಸಭೆ ಚುನಾವಣೆಗೆ ಮುನ್ನವೇ ನಡೆದ ಮಹತ್ವದ ಬೆಳವಣಿಗೆಯಲ್ಲಿ ಕೇಂದ್ರ ಚುನಾವಣಾ ಆಯೋಗವು ಗುರುವಾರ ಚುನಾವಣಾ ಬಾಂಡ್ ಗಳ ಮಾಹಿತಿಯನ್ನು ಬಹಿರಂಗಗೊಳಿಸಿದೆ.
ಸುಪ್ರೀಂ ಕೋರ್ಟ್ ನೀಡಿದ್ದ ಗಡುವಿನ ಒಂದು ದಿನದ ಮುಂಚಿತವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ನೀಡಿದ ಚುನಾವಣಾ ಬಾಂಡ್ ಗಳ ವಿವರವನ್ನು ಆಯೋಗ ಸಾರ್ವಜನಿಕಗೊಳಿಸಿದೆ.
ಚುನಾವಣಾ ಬಾಂಡ್ ಗಳ ಕುರಿತಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ನಂತರ ಎಸ್ ಬಿಐ, ಮಾರ್ಚ್ 12ರಂದು ಚುನಾವಣಾ ಆಯೋಗದೊಂದಿಗೆ ತನ್ನ ಮಾಹಿತಿಯನ್ನು ಹಂಚಿಕೊಂಡಿತ್ತು. ಇದಾದ ನಂತರ ವೆಬ್‌ಸೈಟ್‌ನಲ್ಲಿ ಡೇಟಾ ಅಪ್‌ಲೋಡ್ ಮಾಡಲು ಮಾರ್ಚ್ 15ರ ಸಂಜೆ 5 ಗಂಟೆಯವರೆಗೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸಮಯ ನೀಡಿತ್ತು.
ಇದೀಗ 327 ಪುಟಗಳ ದಾನಿಗಳ ಪಟ್ಟಿ ಮತ್ತು 427 ಪುಟಗಳ ಪಕ್ಷಗಳ ಪಟ್ಟಿಯ ಎರಡು ಡೇಟಾ ಸೆಟ್‌ಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಲಾಗಿದೆ. 2019ರ ಏಪ್ರಿಲ್ 12 ರಿಂದ 1 ಲಕ್ಷ ಮತ್ತು 1 ಕೋಟಿ ಮೌಲ್ಯದ ಮುಖಬೆಲೆಯ ಬಾಂಡ್‌ಗಳ ಖರೀದಿ, ಅವುಗಳನ್ನು ಖರೀದಿಸಿದ ಕಂಪನಿಗಳು ಮತ್ತು ವ್ಯಕ್ತಿಗಳು ಮತ್ತು ಹಣವನ್ನು ಪಡೆದ ರಾಜಕೀಯ ಪಕ್ಷಗಳ ಮಾಹಿತಿಯನ್ನು ಬಯಲು ಮಾಡಲಾಗಿದೆ.
ಚುನಾವಣಾ ಬಾಂಡ್ ಗಳ ದಾನಿಗಳಲ್ಲಿ ಗ್ರಾಸಿಮ್ ಇಂಡಸ್ಟ್ರೀಸ್, ಮೇಘಾ ಇಂಜಿನಿಯರಿಂಗ್, ಪಿರಮಲ್ ಎಂಟರ್‌ಪ್ರೈಸಸ್, ಟೊರೆಂಟ್ ಪವರ್, ಭಾರ್ತಿ ಏರ್‌ಟೆಲ್, ಡಿಎಲ್‌ಎಫ್ ಕಮರ್ಷಿಯಲ್ ಡೆವಲಪರ್ಸ್, ವೇದಾಂತ ಲಿಮಿಟೆಡ್, ಅಪೊಲೊ ಟೈರ್ಸ್, ಲಕ್ಷ್ಮಿ ಮಿತ್ತಲ್, ಎಡೆಲ್‌ವೀಸ್, ಪಿವಿಆರ್, ಕೆವೆಂಟರ್, ಸುಲಾ ವೈನ್, ವೆಲ್ಸ್‌ಪುನ್, ವೆಲ್‌ಸ್‌ಪನ್, ಪರ್ಮಾ ಇತರರು ಸೇರಿದ್ದಾರೆ.
ಮತ್ತೊಂದೆಡೆ, ಚುನಾವಣಾ ಬಾಂಡ್‌ಗಳ ಮೂಲಕ ಹಣವನ್ನು ಸ್ವೀಕರಿಸಿರುವ ಪಟ್ಟಿಯಲ್ಲಿ ಬಿಜೆಪಿ, ಕಾಂಗ್ರೆಸ್, ಎಐಎಡಿಎಂಕೆ, ಬಿಆರ್‌ಎಸ್, ಶಿವಸೇನೆ, ಟಿಡಿಪಿ, ವೈಎಸ್‌ಆರ್ ಕಾಂಗ್ರೆಸ್, ಡಿಎಂಕೆ, ಜೆಡಿಎಸ್, ಎನ್‌ಸಿಪಿ, ತೃಣಮೂಲ ಕಾಂಗ್ರೆಸ್, ಜೆಡಿಯು, ಆರ್‌ಜೆಡಿ, ಎಎಪಿ ಮತ್ತು ಸಮಾಜವಾದಿ ಪಕ್ಷಗಳು ಸೇರಿವೆ.