ಮನೆ ಕಾನೂನು ಚುನಾವಣಾ ಗುರುತು ರಾಜಕೀಯ ಪಕ್ಷಗಳ ವಿಶೇಷ ಆಸ್ತಿಯಲ್ಲ, ನೀರಸ ಸಾಧನೆಯಿಂದ ಅದನ್ನು ಕಳೆದುಕೊಳ್ಳಬಹುದು: ದೆಹಲಿ ಹೈಕೋರ್ಟ್

ಚುನಾವಣಾ ಗುರುತು ರಾಜಕೀಯ ಪಕ್ಷಗಳ ವಿಶೇಷ ಆಸ್ತಿಯಲ್ಲ, ನೀರಸ ಸಾಧನೆಯಿಂದ ಅದನ್ನು ಕಳೆದುಕೊಳ್ಳಬಹುದು: ದೆಹಲಿ ಹೈಕೋರ್ಟ್

0

ರಾಜಕೀಯ ಪಕ್ಷಗಳಿಗೆ ನೀಡಲಾದ ಚುನಾವಣಾ ಗುರುತನ್ನು ಅವು ತಮ್ಮ ವಿಶೇಷ ಆಸ್ತಿ ಎಂದು ಪರಿಭಾವಿಸುವಂತಿಲ್ಲ. ಚುನಾವಣೆಯಲ್ಲಿ ಸೋಲುತ್ತಾ ಹೋದರೆ ಚಿಹ್ನೆ ಬಳಸುವ ಹಕ್ಕನ್ನು ಅವು ಕಳೆದುಕೊಳ್ಳಬಹುದು ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಹೇಳಿದೆ.

[ ತನ್ನ ಅಧ್ಯಕ್ಷ ಉದಯ್ ಕೃ ಮಂಡಲ್ ಅವರ ಮೂಲಕ ಸಮತಾ ಪಕ್ಷ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣ].

ಸುಬ್ರಮಣಿಯನ್ ಸ್ವಾಮಿ ಮತ್ತು ಭಾರತ ಚುನಾವಣಾ ಆಯೋಗ ನಡುವಣ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠ ಚುನಾವಣಾ ಚಿಹ್ನೆ ಮೂರ್ತವಾದ ವಸ್ತುವಲ್ಲ, ಅದರಿಂದ ಯಾವುದೇ ಸಂಪತ್ತು ಉತ್ಪಾದನೆಯಾಗುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.

“ಲಕ್ಷಾಂತರ ಮಂದಿ ಅನಕ್ಷರಸ್ಥ ಮತದಾರರು ನಿರ್ದಿಷ್ಟ ಪಕ್ಷಕ್ಕೆ ಸೇರಿದ ತಮ್ಮ ಆಯ್ಕೆಯ ಅಭ್ಯರ್ಥಿ ಪರವಾಗಿ ಹಕ್ಕು ಚಲಾಯಿಸಲು ಸಹಾಯ ಮಾಡಲೆಂದಷ್ಟೇ ಪಕ್ಷದೊಂದಿಗೆ ಬೆಸೆದ ಚಿಹ್ನೆ ಇದಾಗಿದೆ. ಸಂಬಂಧಪಟ್ಟ ಪಕ್ಷಗಳು ಚಿಹ್ನೆಯನ್ನು ಅವುಗಳ  ವಿಶೇಷ ಆಸ್ತಿ ಎಂದು ಪರಿಗಣಿಸುವಂತಿಲ್ಲ. ಪಕ್ಷದ ಹೀನಾಯ ಪ್ರದರ್ಶನದೊಂದಿಗೆ ಚಿಹ್ನೆ ಬಳಸುವ ಹಕ್ಕನ್ನು ಅವು ಕಳೆದುಕೊಳ್ಳಬಹುದು ಎಂದು  ಚುನಾವಣಾ ಗುರುತು (ಮೀಸಲು ಮತ್ತು ಹಂಚಿಕೆ) ಆದೇಶ- 1968ರ ಆದೇಶ ಸ್ಪಷ್ಟವಾಗಿ ಹೇಳುತ್ತದೆ” ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಶಿವಸೇನೆಯ ಉದ್ಧವ್ ಠಾಕ್ರೆ ಬಣಕ್ಕೆ ತನ್ನ ಗುರುತಾದ ಉರಿವ ಪಂಜನ್ನು ಚಿಹ್ನೆಯಾಗಿ ನೀಡಿದ ಚುನಾವಣಾ ಆಯೋಗದ ನಿರ್ಧಾರ ಪ್ರಶ್ನಿಸಿ ಸಮತಾ ಪಕ್ಷ ಸಲ್ಲಿಸಿದ್ದ ಮೇಲ್ಮನವಿಯನ್ನು ಈ ಮೂಲಕ ಹೈಕೋರ್ಟ್ ಕೆಲ ದಿನಗಳ ಹಿಂದೆ ವಜಾಗೊಳಿಸಿತ್ತು.