ಮೈಸೂರು(Mysuru): ಮತದಾರರ ಪಟ್ಟಿಯ ಪರಿಷ್ಕರಣೆ ಸಂಬಂಧ ಜನವರಿ 05 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ.ಕೆ.ವಿ.ರಾಜೇಂದ್ರ ಅವರು ತಿಳಿಸಿದರು.
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಅಂತಿಮ ಮತದಾರರ ಪಟ್ಟಿ ಪ್ರಕಟ ಸಂಬಂಧ ಹಮ್ಮಿಕೊಂಡಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ ಜಾಲತಾಣ https://ceo.karnataka.gov.in ನಲ್ಲಿ ಲಭ್ಯವಿದ್ದು, ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸಿಕೊಳ್ಳಬಹುದಾಗಿರುತ್ತದೆ ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೋಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳಬಹುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿದ್ದು, ಅಂತಿಮ ಮತದಾರರ ಪಟ್ಟಿಯಲ್ಲಿ 12,72,155 ಪುರುಷ ಮತದಾರರು, 12,87,502 ಮಹಿಳಾ ಮತದಾರರು ಹಾಗೂ 198 ತೃತೀಯ ಲಿಂಗ ಮತದಾರರು ಸೇರಿದಂತೆ ಒಟ್ಟು 25,59,855 ಮತದಾರರು ಇದ್ದಾರೆ. ಇವರಲ್ಲಿ 30650 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ವಿವಿಧ ಕಾರಣಗಳಿಂದ 22,625 ಪ್ರಕರಣಗಳನ್ನು ಕೈಬಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2905 ಮತಗಟ್ಟೆಗಳಿದ್ದು, ವಿವಿಧ ರಾಜಕೀಯ ಪಕ್ಷಗಳು ಪ್ರತಿ ಮತಗಟ್ಟೆಗೆ ರಾಜಕೀಯ ಏಜೆಂಟ್‌ಗಳನ್ನು ನೇಮಿಸಬೇಕು. ಎಂದು ಮಾಹಿತಿ ನೀಡಿದರು.
ಪ್ರಸಕ್ತ 2023 ರ ವಾರ್ಷಿಕ ಮತದಾರರ ಪಟ್ಟಿಯ ಪರಿಷ್ಕರಣೆ ಸಂದರ್ಭದಲ್ಲಿ ಜನವರಿ, 01ರ ಅರ್ಹತಾ ದಿನಾಂಕದ ಜೊತೆಗೆ, 01ನೇ ಏಪ್ರಿಲ್, 01ನೇ ಜುಲೈ ಮತ್ತು 01ನೇ ಅಕ್ಟೋಬರ್ ಗೆ 18 ವರ್ಷ ತುಂಬುವ ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಮುಂಗಡ ಅರ್ಜಿ ಸಲ್ಲಿಸಲು ಅವಕಾಶವಿದೆ. ಇದರಿಂದ 18 ವರ್ಷಗಳನ್ನು ಪೂರೈಸಿದ ಯುವಕರು ನೋಂದಣಿಗಾಗಿ ಮುಂದಿನ ವರ್ಷದ ವಿಶೇಷ ಪರಿಷ್ಕರಣೆವರೆಗೆ ಕಾಯುವುದನ್ನು ತಪ್ಪಿಸಲಾಗಿದೆ. ಮತ್ತು ಮಧ್ಯಂತರ ಅವಧಿಯಲ್ಲಿ ನಡೆಯುವ ಚುನಾವಣೆಗಳಲ್ಲಿ ಮತ ಚಲಾವಣೆಗೆ ಅವಕಾಶ ದೊರೆಯಲಿದೆ ಎಂದರು.
ಈ ಮೊದಲು ಒಂದು ವಿಧಾನಸಭಾ ಕ್ಷೇತ್ರದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತಕ್ಕಾಗಿ ಚಾಲ್ತಿಯಲ್ಲಿದ್ದ ಅರ್ಜಿ ನಮೂನೆ-8ಎ ಯನ್ನು ರದ್ದುಪಡಿಸಲಾಗಿದೆ. ನಮೂನೆ-8ಎ ರಲ್ಲಿದ್ದ ಸೌಲಭ್ಯವನ್ನು ಪರಿಷ್ಕರಿಸಿದ ನಮೂನೆ-8ರಲ್ಲಿ ಒದಗಿಸಲಾಗಿದೆ. 2022 ರ ಸೆಪ್ಟೆಂಬರ್ 1 ರ ನಂತರದಲ್ಲಿ ಸೇರ್ಪಡೆ ಅಥವಾ ತಿದ್ದುಪಡಿ ಮಾಡುವ ಮತದಾರರ ಗುರುತಿನ ಚೀಟಿಯನ್ನು ಸ್ಪೀಡ್ ಪೋಸ್ಟ್ ಮುಖಾಂತರ ಮತದಾರರಿಗೆ ವಿತರಣೆ ಮಾಡಲಾಗುವುದು. ಮತದಾರರ ಪಟ್ಟಿಯ ಪರಿಷ್ಕರಣೆಯ ಸಲುವಾಗಿ 1950 ಮತದಾರರ ಸಹಾಯವಾಣಿಯನ್ನು ಪ್ರಾರಂಭಿಸಲಾಗುತ್ತಿದ್ದು, ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳವರು ಈ ಸಹಾಯವಾಣಿಯ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ತಿಳಿಸಿದರು.
ಮತದಾರರ ಪಟ್ಟಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ದೂ.ಸಂ.08223-274175, ಕೆ.ಆರ್.ನಗರ ತಾಲ್ಲೂಕು ಕಚೇರಿ ದೂ.ಸಂ. 08223-262371,262234, ಹುಣಸೂರು ತಾಲ್ಲೂಕು ಕಚೇರಿ ದೂ.ಸಂ. 08222-252040, ಹೆಚ್.ಡಿ.ಕೋಟೆ ತಾಲ್ಲೂಕು ಕಚೇರಿ ದೂ.ಸಂ.08228-255600, ನಂಜನಗೂಡು ತಾಲ್ಲೂಕು ಕಚೇರಿ ದೂ.ಸಂ.
08221-223108, ಮೈಸೂರು ತಾಲ್ಲೂಕು ಕಚೇರಿ ದೂ.ಸಂ 0821-2414811, 2414812, ಮೈಸೂರು ಮಹಾನಗರ ಪಾಲಿಕೆ ದೂ.ಸಂ. 0821-2418800, ಟಿ.ನರಸೀಪುರ ತಾಲ್ಲೂಕು ಕಚೇರಿ ದೂ.ಸಂ.-08227-260210 ಸಂಪರ್ಕಿಸಬಹುದು ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾದ ಡಾ.ಬಿ.ಎಸ್.ಮಂಜುನಾಥ್, ಭಾರತೀಯ ರಾಷ್ಟೀಯ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ಶಿವಪ್ರಸಾದ್ ಎಂ. ಹಿರಿಯ ಕಾರ್ಯದರ್ಶಿಗಳಾದ ಉತ್ತನಹಳ್ಳಿ ಶಿವಣ್ಣ, ಬಿ.ಜೆ.ಪಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ, ವನಿಷ್ ಕುಮಾರ್ ಎಸ್, ಕಾರ್ಯದರ್ಶಿಗಳಾದ ಪಾಪಣ್ಣ ಅವರು ಉಪಸ್ಥಿತರಿದ್ದರು.