ಮನೆ ರಾಜ್ಯ ಅರಮನೆಗೆ ವಿದ್ಯುತ್ ದೀಪಾಲಂಕಾರದ ಮೆರುಗು: 22 ಸಾವಿರ ಹೊಸ ಬಲ್ಬ್ ಅಳವಡಿಕೆ

ಅರಮನೆಗೆ ವಿದ್ಯುತ್ ದೀಪಾಲಂಕಾರದ ಮೆರುಗು: 22 ಸಾವಿರ ಹೊಸ ಬಲ್ಬ್ ಅಳವಡಿಕೆ

0

ಮೈಸೂರು(Mysuru): ನಾಡಹಬ್ಬ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ವಿಶ್ವವಿಖ್ಯಾತ  ಮೈಸೂರು ಅರಮನೆಯು ಹೊಂಬಣ್ಣದಲ್ಲಿ ಕಂಗೊಳಿಸಲು ಸನ್ನದ್ದಗೊಂಡಿದೆ.

ಅರಮನೆಯ ವಿದ್ಯುತ್‌ ದೀಪಾಲಂಕಾರದ ಸಿದ್ಧತೆ ಅಂತಿಮಗೊಂಡಿದ್ದು, 22 ಸಾವಿರ ಹೊಸ ವಿದ್ಯುತ್‌ ದೀಪಗಳನ್ನು ಅಳವಡಿಸಲಾಗಿದೆ.

ಆವರಣದ ಎಲ್ಲಾ ದೇಗುಲಗಳು, ಕೋಟೆ ಸೇರಿದಂತೆ ಎಲ್ಲ ಭಾಗಗಳಿಗೂ ವಿದ್ಯುತ್‌ ದೀಪ ಅಳವಡಿಸುವ ಹಾಗೂ ಸುಣ್ಣ– ಬಣ್ಣ ಲೇಪನ ಕಾರ್ಯವು ತಿಂಗಳ ಹಿಂದೆ ಆರಂಭವಾಗಿತ್ತು. ಈಗ ಕಾಮಗಾರಿಗಳು ಬಹುತೇಕ ಮುಗಿದಿದ್ದು, ದೀ‍ಪ ಅಳವಡಿಕೆ ಕಾರ್ಯವು ಕೊನೆಯ ಹಂತದಲ್ಲಿದೆ.

ಅರಮನೆಯ ತೂಗುವ ದೀಪಗಳಲ್ಲಿ ಒಡೆದ ಗಾಜುಗಳನ್ನು ತೆರವುಗೊಳಿಸುವ, ವೈರಿಂಗ್‌ ಸರಿಪಡಿಸುವ ಕೆಲಸವನ್ನು ಕಾರ್ಮಿಕರು ಮುಗಿಸಿದ್ದಾರೆ. ಎತ್ತರ ದೀಪದ ಕಂಬಗಳಿಗೆ ಮರದ ಪೋಲ್‌ಗಳ ಅಟ್ಟಣಿಗೆಗಳನ್ನು ಕಟ್ಟಿ ದುರಸ್ತಿಗೊಳಿಸಿದ್ದಾರೆ.

ಒಳಾಂಗಣದಲ್ಲಿ ಮಸಿ ತುಂಬಿದ್ದ ಅಲಂಕೃತ ದೀಪಗಳ ಗಾಜು ಗಳನ್ನು ಜೋಪಾನವಾಗಿ ಕೆಳಗಿಳಿಸಿ ಮಸಿ ಒರೆಸಿ ಹೊಳೆಯುವಂತೆ ಮಾಡಲಾಗಿದೆ. ಮರು ಜೋಡಣೆ ಕಾರ್ಯವೂ ಮುಗಿದಿದೆ. ಲಕ್ಷ ದೀಪಗಳು ಅರಮನೆಯನ್ನು ಬೆಳಗಲು ಸಿದ್ಧಗೊಂಡಿವೆ.

ಅರಮನೆ ಮಂಡಳಿ ನಿರ್ದೇಶಕ ಟಿ.ಎಸ್‌.ಸುಬ್ರಹ್ಮಣ್ಯ ಈ ಕುರಿತು ಪ್ರತಿಕ್ರಿಯಿಸಿ, ಪ್ರತಿ ವರ್ಷವೂ ಕೆಟ್ಟಿದ್ದ ಬಲ್ಬ್‌ಗಳನ್ನು ಬದಲಿಸಲಾಗುತ್ತದೆ. ಗಾಳಿ–ಮಳೆ ಕಾರಣ ಈ ವರ್ಷ ಹೆಚ್ಚು ಬಲ್ಬ್‌ಗಳು ಹಾಳಾಗಿದ್ದವು. ಎಲ್ಲವನ್ನೂ ಗುರುತಿಸಿರುವ ಸಿಬ್ಬಂದಿ ದುರಸ್ತಿ ಮಾಡಿದ್ದಾರೆ. ಸುಣ್ಣ–ಬಣ್ಣದ ಕೆಲಸವೂ ಮುಗಿದಿದೆ ಎಂದು ತಿಳಿಸಿದ್ದಾರೆ.

ಅರಮನೆಗೆ ಅಳವಡಿಸುವ ಬಲ್ಬ್‌ಗಳನ್ನು ಕಳಚಲು ಆಗುವುದಿಲ್ಲ. ತಿರುಪಿನ ಬುರುಡೆಯನ್ನು ಹೊಂದಿರುವ ಬಲ್ಬ್‌ಗಳನ್ನು ಅರಮನೆಗೆಂದೇ ವಿಶೇಷವಾಗಿ ತಯಾರಿಸಲಾಗುತ್ತದೆ.

ಅರಮನೆ ಆವರಣದ ಬೀದಿಗಳು, ಉದ್ಯಾನಗಳಲ್ಲಿ ಅಲಂಕಾರಿಕ ವಿದ್ಯುತ್‌ ದೀಪಗಳಿಗೆ ಎಲ್‌ಇಡಿ ಬಲ್ಬ್‌ ಬಳಸಲಾಗಿದೆ. ಫೈವ್‌ ಲೈಟ್ಸ್‌, ಅರಮನೆಯ ಒಳಗಿನ ತೂಗುವ ದೀಪಗಳಿಗೂ ಎಲ್‌ಇಡಿ ಬಲ್ಬ್‌ಗಳನ್ನೇ ಬಳಸಲಾಗುತ್ತದೆ. ನವರಾತ್ರಿ ವೇಳೆ ಅರಮನೆಯಲ್ಲಿ ವಾಡಿಕೆಯಂತೆ ಸಂಜೆ 7ರಿಂದ ರಾತ್ರಿ 10ರವೆರೆಗೆ ವಿದ್ಯುತ್‌ ದೀಪಾಲಂಕಾರ ಜಗಮಗಿಸಲಿದೆ.