ಆನೆಗಳನ್ನು ರಕ್ಷಿಸದೇ ಹೋದರೆ ಡೈನಸೊರ್‌ಗಳಂತೆಯೇ ಅವುಗಳೂ ಸಹ ಶೀಘ್ರದಲ್ಲೇ ಅವಸಾನ ಹೊಂದಲಿದ್ದು ಮುಂದಿನ ಪೀಳಿಗೆ ಅವುಗಳನ್ನು ವಸ್ತು ಸಂಗ್ರಹಾಲಯದಲ್ಲಿ ನೋಡಬೇಕಾದೀತು ಎಂದು ಕೇರಳ ಹೈಕೋರ್ಟ್ ಮಂಗಳವಾರ ಕಳವಳ ವ್ಯಕ್ತಪಡಿಸಿದೆ.
ಸೆರೆ ಸಿಕ್ಕ ಆನೆಗಳು ಸಾವನ್ನಪ್ಪುತ್ತಿರುವುದು ಮತ್ತು ಉತ್ಸವ, ಮೆರವಣಿಗೆಗಳ ವೇಳೆ ಆನೆಗಳ ಮೇಲೆ ಕ್ರೌರ್ಯ ಎಸಗುತ್ತಿರುವ ಬಗ್ಗೆ ನ್ಯಾಯಮೂರ್ತಿಗಳಾದ ಎ ಕೆ ಜಯಶಂಕರನ್ ನಂಬಿಯಾರ್ ಮತ್ತು ಗೋಪಿನಾಥ್ ಪಿ ಅವರಿದ್ದ ವಿಭಾಗೀಯ ಪೀಠ ಕಳವಳ ವ್ಯಕ್ತಪಡಿಸಿತು.
“ಸೆರೆ ಹಿಡಿದ 600 ಆನೆಗಳಲ್ಲಿ, ಕನಿಷ್ಠ 154 ಸತ್ತಿವೆ. ಅಂದರೆ ಶೇ 25-30ರಷ್ಟು ಆನೆಗಳು ಸಾವನ್ನಪ್ಪಿವೆ. ಇದು ಮುಂದುವರಿದರೆ, ಮುಂದಿನ ಪೀಳಿಗೆ ವಸ್ತುಸಂಗ್ರಹಾಲಯಗಳಲ್ಲಿ ಡೈನಸೊರ್ ಗಳ ರೀತಿಯ ಪ್ರಾಣಿಗಳನ್ನು ಹೇಗೆ ನೋಡುತ್ತಾರೋ ಹಾಗೆ ಇವುಗಳನ್ನು ನೋಡಬೇಕಾಗುತ್ತದೆ. ಸಂಪ್ರದಾಯದ ಹೆಸರಿನಲ್ಲಿ ಇದನ್ನು ನಡೆಸುತ್ತಿರುವವರು ದಯವಿಟ್ಟು ನೆನಪಿಡಿ” ಎಂದು ನ್ಯಾ. ಗೋಪಿನಾಥ್ ಎಚ್ಚರಿಕೆ ನೀಡಿದರು.
ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಇಂತಹ ಆಚರಣೆಗಳು ಸಾಂಸ್ಕೃತಿಕ ಅಥವಾ ಧಾರ್ಮಿಕ ಸಂಪ್ರದಾಯಗಳಿಗಿಂತ ಹೆಚ್ಚಾಗಿ ವಾಣಿಜ್ಯ ಉದ್ದೇಶದಿಂದ ಕೂಡಿರುತ್ತವೆ ಎಂದು ಪೀಠ ಹೇಳಿದೆ.
” 25 ಅಥವಾ 30 ಆನೆಗಳು ಅಗತ್ಯವಿರುವ ಸಾಂಪ್ರದಾಯಿಕ ಆಚರಣೆಗಳು 500ರಿಂದ ಎಂಟು ನೂರು ವರ್ಷಗಳ ಹಿಂದಿನಿಂದ ನಡೆದುಕೊಂಡು ಬಂದಿದೆ ಎಂಬುದು ಸಂಪೂರ್ಣ ಹುನ್ನಾರ ಎನ್ನುವುದು ನಮಗಂತೂ ಸ್ಪಷ್ಟವಾಗಿದೆ. ಇದು ಸಂಪೂರ್ಣವಾಗಿ ವಾಣಿಜ್ಯ ಉದ್ದೇಶಗಳಿಗಾಗಿ ಮಾಡಲಾಗುತ್ತಿರುವ ಪ್ರಚಾರ. ಪ್ರತಿಯೊಂದು ಧಾರ್ಮಿಕ ಆಚರಣೆಗಳು ಸುರಕ್ಷತಾ ಅಗತ್ಯತೆ ಮತ್ತು ನಿಯಮಾವಳಿಗಳನ್ನು ಪಾಲಿಸಬೇಕು” ಎಂದು ನ್ಯಾಯಮೂರ್ತಿ ಗೋಪಿನಾಥ್ ಹೇಳಿದರು.
ಈ ಹಿನ್ನೆಲೆಯಲ್ಲಿ ಪ್ರಾಣಿಗಳನ್ನು ಮೆರವಣಿಗೆ ಮಾಡುವಾಗ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಅದು ಹೇಳಿದೆ. ಬಂಧಿತ ಆನೆಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವ ಕುರಿತ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಾಣಿ ಹಿಂಸೆ ತಡೆಯುವ ಉದ್ದೇಶದಿಂದ ಜುಲೈ 2021 ರಲ್ಲಿ ದಾಖಲಿಸಿಕೊಳ್ಳಲಾಗಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ ಭಾಗವಾಗಿ ಈ ವಿಚಾರಣೆ ನಡೆದಿದೆ.
ಸರ್ಕಾರ ನಿಯಮ ಜಾರಿಗೆ ತರುವವರೆಗೆ ಆನೆಗಳ ಮೇಲಿನ ಕ್ರೌರ್ಯ ತಡೆಯಲು ನ್ಯಾಯಾಂಗ ಆದೇಶದಂತೆ ಹೊರಡಿಸಬಹುದಾದ ಮಾರ್ಗಸೂಚಿಗಳ ಬಗ್ಗೆ ಸಲಹೆ ನೀಡಲು ಆನೆಗಳ ಮಾಲೀಕರು, ಎನ್‌ಜಿಒಗಳು ಮತ್ತು ದೇವಾಲಯ ಸಮಿತಿ ಸೇರಿದಂತೆ ಭಾಗೀದಾರರಿಗೆ ಸೂಚಿಸಿತ್ತು. ಅದರಂತೆ, ಆನೆಗಳನ್ನು ಧಾರ್ಮಿಕ ಕಾರ್ಯಕ್ರಮಗಳಿಗೆ ಮಾತ್ರ ಬಳಸಬೇಕೇ ವಿನಾ ಯಾವುದೇ ಖಾಸಗಿ ಕಾರ್ಯಕ್ರಮ, ಸಭೆಗಳು ಅಥವಾ ಉದ್ಘಾಟನೆಗಳಿಗೆ ಬಳಸದಂತೆ ಶಿಫಾರಸು ಮಾಡುವ ವರದಿಯನ್ನು ಪ್ರಕರಣದ ಅಮಿಕಸ್ ಕ್ಯೂರಿ ಸಲ್ಲಿಸಿದ್ದಾರೆ.
ಆನೆಗಳಿಗೆ ಉಂಟಾಗುವ ಶ್ರಮ ತಪ್ಪಿಸಲು ಒಂದು ಮೆರವಣಿಗೆಯಿಂದ ಮತ್ತೊಂದು ಮೆರವಣಿಗೆ ನಡುವೆ ಗಜಗಳಿಗೆ ಕಡ್ಡಾಯವಾಗಿ 24-ಗಂಟೆಗಳ ವಿಶ್ರಾಂತಿ ನೀಡಬೇಕು. ಬಳಲಿಕೆ ತಡೆಗಟ್ಟಲು ವಾಹನದ ಮೂಲಕ ಕೊಂಡೊಯ್ಯುವವರು 100 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಕೊಂಡೊಯ್ಯುವಂತಿಲ್ಲ. ಅಥವಾ ಪ್ರತಿದಿನ 30 ಕಿಲೋಮೀಟರ್‌ಗಳಷ್ಟೇ ಅವುಗಳನ್ನು ನಡೆಸಬೇಕು ಎಂದು ವರದಿಯಲ್ಲಿರುವ ಮಾರ್ಗಸೂಚಿಗಳು ತಿಳಿಸಿವೆ.
ಆಕ್ರಮಣಶೀಲತೆ ಕಡಿಮೆ ಮಾಡಲು ಆನೆಗಳ ನಡುವೆ ಕನಿಷ್ಠ ಮೂರು ಮೀಟರ್ ಅಂತರವನ್ನು ಕಾಯ್ದುಕೊಳ್ಳಬೇಕು. ಅನಗತ್ಯ ಒತ್ತಡ ಉಂಟುಮಾಡುವ ಸಲುವಾಗಿ ದಂತ ಬೆಳೆಸುವ ಸ್ಪರ್ಧೆಮತ್ತು ಹೂವಿನ ಮಳೆಯಂತಹ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂದು ವರದಿ ಹೇಳಿದೆ.
ವಯಸ್ಸಿಗೆ ಸಂಬಂಧಿಸಿದ ಆರೋಗ್ಯ ಕಾಳಜಿಗಳನ್ನು ಪರಿಗಣಿಸಿ 65 ವರ್ಷ ಮೇಲ್ಪಟ್ಟ ಆನೆಗಳಿಗೆ ಮೆರವಣಿಗೆಯಿಂದ ವಿನಾಯಿತಿ ನೀಡುವಂತೆ ಶಿಫಾರಸು ಮಾಡಲಾಗಿದೆ. ಅಲ್ಲದೆ ಸಾರ್ವಜನಿಕ ಸುರಕ್ಷತಾ ಕ್ರಮಗಳು ಸೇರಿದಂತೆ ಅನೇಕ ಮಾರ್ಗಸೂಚಿಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ
ವಿಚಾರಣೆಯ ವೇಳೆ, ರಾಜ್ಯಕ್ಕೆ ಹೊಸ ಆನೆಗಳನ್ನು ಕರೆತರುವ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. ಈ ಹಿಂದೆಯೂ ನ್ಯಾಯಾಲಯ ಆನೆಗಳನ್ನು ತರದಂತೆ ಆದೇಶ ಹೊರಡಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
“ಸಿಂಹಕ್ಕೆ ಮಾತು ಬರುವವರೆಗೆ ಬೇಟೆಗಾರನನ್ನು ವಿಜೃಂಭಿಸಲಾಗುತ್ತದೆ. ಸಂಪ್ರದಾಯ ಆಚರಿಸಬಹುದಾದರೂ ಅದು ಬೇರೆಯವರಿಗೆ ನೋವುಂಟು ಮಾಡುವಂತಿಲ್ಲ. ಈ ರಾಜ್ಯವನ್ನು ಆನೆ ಸ್ನೇಹಿ ಮಾಡದ ಹೊರತು, ಜನರು ಆನೆಗಳನ್ನು ನೋಡಿಕೊಳ್ಳುತ್ತಾರೆ ಎಂದು ನಮಗೆ ಮನವರಿಕೆಯಾಗದ ಹೊರತು ಯಾವುದೇ (ಹೊಸ) ಆನೆಯನ್ನು ತರುವ ಪ್ರಶ್ನೆಯೇ ಇಲ್ಲ. ನಾವು ಯಾವುದೇ ಹೊಸ ಆನೆಗಳನ್ನು ಇಲ್ಲಿಗೆ ಬಿಡುವುದಿಲ್ಲ” ಎಂದು ನ್ಯಾಯಮೂರ್ತಿ ನಂಬಿಯಾರ್ ಹೇಳಿದರು.
ಮಾರ್ಗಸೂಚಿಗಳನ್ನು ಅಂತಿಮಗೊಳಿಸುವ ಸಲುವಾಗಿ ನ್ಯಾಯಾಲಯ ನವೆಂಬರ್ 12ರಂದು ಪ್ರಕರಣದ ವಿಚಾರಣೆ ನಡೆಸಲಿದೆ.