ಮೈಸೂರು: ಸರ್ಕಾರ ಉದ್ಯೋಗ ಸೃಷ್ಟಿ ಬದಲಿಗೆ ಉದ್ಯಮಗಳಿಗೆ ಪ್ರೋತ್ಸಾಹ ನೀಡಬೇಕು. ಉದ್ಯಮ ಸ್ನೇಹಿ ವಾತಾವರಣ ಹಾಗೂ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಇನ್ಫೋಸಿಸ್ ಸಂಸ್ಥಾಪಕ ನಾರಾಯಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಖಾಸಗಿ ಹೋಟೆಲ್ ನಲ್ಲಿ ಭೇರುಂಡ ಫೌಂಡೇಶನ್ ವತಿಯಿಂದ ಇಂದು ಆಯೋಜಿಸಿದ್ದ “ ಮೈಸೂರು ಉದ್ಯಮಿಗಳ ವೇದಿಕೆ” ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಎನ್. ಆರ್. ನಾರಾಯಣಮೂರ್ತಿ ಮಾತನಾಡಿದರು.
ಸಮಾಜದ ತಳ ವರ್ಗದ ಮಗುವಿಗೂ ಉತ್ತಮ ಶಿಕ್ಷಣ, ಸೌಕರ್ಯ ಸಿಗಬೇಕು. ಅದು ನಮ್ಮೆಲ್ಲರ ಜವಾಬ್ದಾರಿ. ಉಚಿತ ಹಣ ಕೊಡುವುದು ಉತ್ತಮ ಯೋಜನೆ ಅಲ್ಲ. ಕೌಶಲ ಬೆಳೆಸುವುದು, ಶಿಕ್ಷಣ ಕೊಡುವುದು, ತನ್ನ ಕಾಲ ಮೇಲೆ ನಿಲ್ಲುವಂತೆ ಮಾಡುವುದು ನಮ್ಮ ಆದ್ಯತೆ ಆಗಬೇಕು.
ಉದ್ಯಮ ಎನ್ನುವುದು ಸಂಪತ್ತಿನ ಸೃಷ್ಟಿ ಜೊತೆಗೆ ಉದ್ಯೋಗ, ತೆರಿಗೆ ಒದಗಿಸುತ್ತದೆ. ಉದ್ಯಮಿ ದೊಡ್ಡ ಕನಸುಗಾರ. ಉದ್ಯಮಿಗಳ ಮೇಲೆ ಈ ಸಮಾಜದ ಅಭಿವೃದ್ಧಿಯ ದೊಡ್ಡ ಹೊಣೆ ಇದೆ. ಅನ್ನ-ಆಹಾರ, ವಸತಿ ನೀಡಿದ ಸಮಾಜಕ್ಕೆ “ ಗರಿಬಿ ಹಠಾವೊ ..” ಎಂಬುದು ಕೇವಲ ಘೋಷಣೆಗೆ ಸರಿ ಅಷ್ಟೇ. ಹೆಚ್ಚು ಉದ್ಯೋಗ ಸೃಷ್ಟಿ ಆದಾಗ ಮಾತ್ರ ಅದು ಸಾಧ್ಯವಾಗುತ್ತದೆ ಎಂದರು.
50 ವರ್ಷಗಳ ಹಿಂದೆ ಸೋಷಿಯಲಿಸಂ, ಕಮ್ಯುನಿಸಂ ಮೊದಲಾದ ವಿಷಯಗಳ ಕುರಿತು ಪ್ಯಾರಿಸ್ ನಲ್ಲಿ ಕಲಿಯುತ್ತಿದ್ದೆ. ಆಗ ಬಡತನ ಹೋಗಲಾಡಿಸಲು ಐಡಿಯಾಗಳನ್ನು ಚರ್ಚಿಸಲಾಗುತಿತ್ತು. ಅವು ಉದ್ಯೋಗಗಳಾಗಿ ಬದಲಾದವು. ಜನರಿಗೆ ಉದ್ಯೋಗ ದೊರೆತು ಸರ್ಕಾರಕ್ಕೆ ತೆರಿಗೆ ಬಂತು. ಆಸ್ತಿ ಕ್ರಿಯೇಟ್ ನಲ್ಲಿ ಸರ್ಕಾರ ಕ್ಯಾಪಿಟಲಿಸ್ಟ್ ಆಗಿದ್ದು, ಉದ್ಯಮಗಳಿಗೆ ಒತ್ತು ನೀಡಬೇಕು. 40-45 ದೇಶಗಳ ಅಧ್ಯಯನದಿಂದ ಈ ಮಾತು ಹೇಳುತ್ತಿದ್ದೇನೆ. ಉತ್ತಮ ಪಾಲಿಸಿಗಳು ಅಗತ್ಯ ಎಂದರು.














