ಬೆಂಗಳೂರು : ಸಾರ್ವಜನಿಕರಿಗೆ ಹಾಗೂ ರೈತರಿಗೆ ಅನುಕೂಲ ಮಾಡಿಕೊಡುವಂತಹ, ಕೆರೆಗಳನ್ನ ತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣದಂತಹ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್. ಎಸ್ ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ವಿಕಾಸಸೌಧದಲ್ಲಿ ಆಯೋಜಿಸಿದ್ದ ಸಣ್ಣ ನೀರಾವರಿ ಮತ್ತು ಅಂತರ್ಜಲ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯದಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿಗಳ ಪ್ರಗತಿಯ ಮಾಹಿತಿಯನ್ನು ಪಡೆದುಕೊಂಡರು.
ಕಾಲಮಿತಿಯಲ್ಲಿ ಕಾಮಾಗಾರಿ ಮುಗಿಸಲು ಆದ್ಯತೆ ನೀಡಿ:
ಕಾಮಗಾರಿಗಳನ್ನ ನೀಡಿರುವ ಕಾಲಮಿತಿಯಲ್ಲಿ ಮುಗಿಸಲು ಅಧಿಕಾರಿಗಳು ಆದ್ಯತೆ ನೀಡಬೇಕು. ಕಾಮಗಾರಿಗಳಿಗಿರುವ ಅಡೆತಡೆಗಳನ್ನ ನಿವಾರಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಪ್ರಮುಖ ಪಾತ್ರವನ್ನು ವಹಿಸುತ್ತಾರೆ. ಕಾಲ ಕಾಲಕ್ಕೆ ಯೋಜನೆಗಳ ಕಾಮಗಾರಿಗಳನ್ನು ಪರಿಶೀಲಿಸುವುದರಿಂದ ಕಾಲಮಿತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯ. ಈ ನಿಟ್ಟಿನಲ್ಲಿ ಅಧಿಕಾರಿಗಳು ಆದ್ಯತೆ ನೀಡಬೇಕು ಎಂದು ಸೂಚನೆ ನೀಡಿದರು.
ರೈತರಿಗೆ ಅನುಕೂಲವಾಗುವಂತಹ ಕಾಮಗಾರಿಗಳಿಗೆ ಒತ್ತು ನೀಡಿ:
ನಮ್ಮ ಇಲಾಖೆಯಿಂದ ಕೈಗೊಳ್ಳುವ ಬಹುತೇಕ ಕಾಮಗಾರಿಗಳು ಏತ ನೀರಾವರಿ ಯೋಜನೆಯ ಅಡಿಯಲ್ಲಿ ಕೆರೆಗಳನ್ನು ತುಂಬಿಸುವಂತಹವುಗಳಾಗಿವೆ. ಕೆರೆತುಂಬಿಸುವ ಹಾಗೂ ಬ್ಯಾರೇಜ್ ನಿರ್ಮಾಣದಂತಹ ಕಾಮಗಾರಿಗಳು ರೈತರಿಗೆ ಅನುಕೂಲ ಮಾಡಿಕೊಡುತ್ತವೆ. ಕೆರೆಗಳ ನಿರ್ಮಾಣ, ಕೆರೆಗಳಿಗೆ ನೀರು ತುಂಬಿಸುವುದು ಹಾಗೂ ಬ್ಯಾರೇಜ್ ನಿರ್ಮಾಣ ಕಾರ್ಯಕ್ಕೆ ಒತ್ತು ನೀಡಬೇಕು. ಈ ಕಾರ್ಯಗಳಿಂದ ಅಂತರ್ಜಲ ಹೆಚ್ಚಾಗುವುದಲ್ಲದೆ, ಮಳೆಯ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. ಈ ಹಿನ್ನಲೆಯಲ್ಲಿ ಕಾಮಗಾರಿಗಳನ್ನ ಕಾಲಮಿತಿಯಲ್ಲಿ ಮುಗಿಸುವ ನಿಟ್ಟಿನಲ್ಲಿ ಆದ್ಯತೆ ನೀಡಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರತಿ ತಿಂಗಳು ಕಾರ್ಯದರ್ಶಿಗಳಿಗೆ ಪ್ರಗತಿಯ ವರದಿ ಸಲ್ಲಿಸಿ:
ಮುಖ್ಯ ಇಂಜನೀಯರ್ಗಳೂ ತಮ್ಮ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಯೋಜನೆಗಳ ಬಗ್ಗೆ ಕೆಳಮಟ್ಟದ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಭೆಯನ್ನು ನಡೆಸಬೇಕು. ಅಲ್ಲದೇ, ಆಯಾ ಕಾಲಕ್ಕೆ ಕಾಮಗಾರಿಗಳು ನಡೆಯುತ್ತಿರುವ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲಿಸಬೇಕು. ಈ ಪರಿಶೀಲನೆಯ ವರದಿಯನ್ನು ಪ್ರತಿ ತಿಂಗಳೂ ಇಲಾಖೆಯ ಕಾರ್ಯದರ್ಶಿಗಳಿಗೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಕಾರ್ಯದರ್ಶಿಗಳಾದ ಯತೀಶ್ ಚಂದ್ರ, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ದಿ ಇಲಾಖೆಯ ದಕ್ಷಿಣ ವಲಯ, ಉತ್ತರ ವಲಯದ ಮುಖ್ಯ ಅಭಿಯಂತರರು, ಅಂತರ್ಜಲ ನಿರ್ದೇಶನಾಲಯ ಹಾಗೂ ಅಟಲ್ ಭೂಜಲ ಯೋಜನೆಯ ನಿರ್ದೇಶಕರು, ಇಲಾಖೆಯ ಅಧೀಕ್ಷಕ ಅಭಿಯಂತರರು ಮತ್ತು ಕಾರ್ಯಪಾಲಕ ಇಂಜಿನೀಯರ್ಗಳು ಉಪಸ್ಥಿತರಿದ್ದರು.