ಮನೆ ಕಾನೂನು ಗರ್ಭಿಣಿ ಉದ್ಯೋಗಿಗಳ ಬಗ್ಗೆ ಉದ್ಯೋಗದಾತರಿಗೆ ಸಹಾನುಭೂತಿ ಇರಬೇಕು: ಬಾಂಬೆ ಹೈಕೋರ್ಟ್

ಗರ್ಭಿಣಿ ಉದ್ಯೋಗಿಗಳ ಬಗ್ಗೆ ಉದ್ಯೋಗದಾತರಿಗೆ ಸಹಾನುಭೂತಿ ಇರಬೇಕು: ಬಾಂಬೆ ಹೈಕೋರ್ಟ್

0

ಗರ್ಭಿಣಿ ಉದ್ಯೋಗಿಗಳ ಬಗ್ಗೆ ಉದ್ಯೋಗದಾತರಿಗೆ ಸಹಾನುಭೂತಿ ಇರಬೇಕು ಎಂದು ತಿಳಿಸಿರುವ ಬಾಂಬೆ ಹೈಕೋರ್ಟ್‌ ಮಹಿಳೆಯೊಬ್ಬರಿಗೆ ಹೆರಿಗೆ ಸೌಲಭ್ಯ ನೀಡುವಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಶುಕ್ರವಾರ ಆದೇಶಿಸಿದೆ .

Join Our Whatsapp Group

ಹೆರಿಗೆ ರಜೆ ಮಂಜೂರಾತಿಗೆ ಅರ್ಹರಲ್ಲ ಎಂಬ ಕಾರಣಕ್ಕಾಗಿ ಎಎಐ ಹೆರಿಗೆ ಸೌಲಭ್ಯಗಳನ್ನು ತಿರಸ್ಕರಿಸಿರುವುದನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ ಎಸ್ ಚಂದೂರ್ಕರ್ ಮತ್ತು ಜಿತೇಂದ್ರ ಜೈನ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮಹಿಳಾ ನೌಕರರ ಕರ್ತವ್ಯಗಳ ಸ್ವರೂಪ ಏನೇ ಇರಲಿ, ಅವರಿಗೆ ಅರ್ಹವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು ಎಂದ ನ್ಯಾಯಾಲಯ  ಮಹಿಳೆಗೆ ತಾಯಿಗೆ ನೀಡಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಎಎಐಗೆ ನಿರ್ದೇಶಿಸಿತು.

“ನಮ್ಮ ಸಮಾಜದ ಅರ್ಧದಷ್ಟಿರುವ ಮಹಿಳೆಯರಿಗೆ ಜೀವನೋಪಾಯಕ್ಕಾಗಿ ಅವರು ಕೆಲಸ ಮಾಡುವ ಸ್ಥಳಗಳಲ್ಲಿ ಘನತೆ ಗೌರವ ನೀಡಬೇಕು. ಅವರ ಕರ್ತವ್ಯಗಳ ಸ್ವರೂಪ, ಅವರ ವೃತ್ತಿ ಮತ್ತು ಅವರು ಕೆಲಸ ಮಾಡುವ ಸ್ಥಳ ಯಾವುದೇ ಇದ್ದರೂ, ಅವರಿಗೆ ಅರ್ಹವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕು. ತಾಯಿಯಾಗುವುದು ಮಹಿಳೆಯ ಜೀವನದಲ್ಲಿ ಅತ್ಯಂತ ನೈಸರ್ಗಿಕ ವಿದ್ಯಮಾನವಾಗಿದೆ. ಸೇವೆಯಲ್ಲಿರುವ ಮಹಿಳೆಗೆ ಮಗುವಿನ ಜನನವನ್ನು ಸುಲಭಗೊಳಿಸಲು ಏನಾದರೂ ಅಗತ್ಯವಿದ್ದರೆ ಉದ್ಯೋಗದಾತ ಆಕೆಯನ್ನು ಗಣನೆಗೆ ತೆಗೆದುಕೊಂಡು ಸಹಾನುಭೂತಿ ತೋರಬೇಕು. ಮಗು ಗರ್ಭದಲ್ಲಿದ್ದಾಗ ಇಲ್ಲವೇ ಹುಟ್ಟಿದ ನಂತರ ಮಹಿಳಾ ನೌಕರೆ ಕೆಲಸದ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸಬೇಕಾದಂತಹ ದೈಹಿಕ ತೊಂದರೆಗಳನ್ನು ಅರಿತುಕೊಳ್ಳಬೇಕು” ನ್ಯಾಯಾಲಯದ ಆದೇಶ ವಿವರಿಸಿದೆ.

ಅರ್ಜಿದಾರರಿಗೆ 1997 ರಲ್ಲಿ ಮಗುವಿತ್ತು. ಪತಿ ನಿಧನರಾದ ಬಳಿಕ ಆಕೆ ಅನುಕಂಪದ ಆಧಾರದಲ್ಲಿ ಎಎಐನಲ್ಲಿ ಉದ್ಯೋಗ ಪಡೆದಿದ್ದರು.  ಬಳಿಕ ಮರುಮದುವೆಯಾದ ಅವರು 2009ರಲ್ಲಿ ಮಗುವಿಗೆ ಜನ್ಮ ನೀಡಿದರು. ಆದರೆ ಅವರು ಆ ಬಾರಿ ಹೆರಿಗೆ ಸೌಲಭ್ಯ ಪಡೆದಿರಲಿಲ್ಲ. 2012ರಲ್ಲಿ, ಮೂರನೇ ಮಗುವಿಗೆ ಜನ್ಮ ನೀಡುವ ವೇಳೆ ಹೆರಿಗೆ ಸೌಲಭ್ಯ ಕೋರಿ ಅವರು ಅರ್ಜಿ ಸಲ್ಲಿಸಿದ್ದರು. ಆದರೆ ಈಗಾಗಲೇ ಇಬ್ಬರು ಮಕ್ಕಳಿದ್ದಾರೆ ಎಂಬ ಕಾರಣಕ್ಕಾಗಿ ಎಎಐ ಸೌಲಭ್ಯ ನಿರಾಕರಿಸಿತು.

2003ರ ಹೆರಿಗೆ ರಜೆಯ ನಿಯಮಾವಳಿಯ ಉದ್ದೇಶ  ಹೆರಿಗೆ ರಜೆ ಸೌಲಭ್ಯ ನೀಡುವುದೇ ಹೊರತು ಜನಸಂಖ್ಯೆಯನ್ನು ನಿಗ್ರಹಿಸುವುದಲ್ಲ. ಈ ಹಿನ್ನೆಲೆಯಲ್ಲಿ ಎಎಐ ನಿರ್ಧಾರ ಸಮರ್ಥನೀಯವಲ್ಲ ಎಂದು ತಿಳಿಸಿದ ನ್ಯಾಯಾಲಯ ಅದರ ನಿರ್ಧಾರವನ್ನು ರದ್ದುಗೊಳಿಸಿತು. ಜೊತೆಗೆ 8 ವಾರಗಳಲ್ಲಿ ಮಹಿಳೆಗೆ ಹೆರಿಗೆ ಸೌಲಭ್ಯ ನೀಡುವಂತೆ ನಿರ್ದೇಶನ ನೀಡಿತು.