“ಉದ್ಯೋಗಿಗಳಿಗೆ ಕನಿಷ್ಠ ವೇತನ ನಿಗದಿ ಮಾಡುವಾಗ ಉದ್ಯೋಗದಾತರ ಅನಿಸಿಕೆಯನ್ನೂ ಆಲಿಸಬೇಕು” ಎಂದು ಕರ್ನಾಟಕ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಮತ್ತು ಇತರರು ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್ ಅವರ ನೇತೃತ್ವದ ವಿಭಾಗೀಯ ಪೀಠ ಭಾಗಶಃ ಪುರಸ್ಕರಿಸಿದೆ.
“ಕನಿಷ್ಠ ವೇತನ ನಿಗದಿಯ ವಿಚಾರ ಬಂದಾಗ ಸರ್ಕಾರ ಸಮಗ್ರ ದೃಷ್ಟಿಯಿಂದ ಪರಿಸ್ಥಿತಿ ಹಾಗೂ ಸ್ಥಿತಿಗತಿಗಳನ್ನು ಅರಿತು ನಿಗದಿ ಮಾಡಬೇಕು. ಹಾಗೆ ಮಾಡುವಾಗ ಉದ್ಯೋಗದಾತರ ಅಭಿಪ್ರಾಯ, ಅನಿಸಿಕೆಗಳನ್ನೂ ಪರಿಗಣಿಸಬೇಕಾಗುತ್ತದೆ” ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣವನ್ನು ಮರಳಿ ಏಕಸದಸ್ಯ ಪೀಠಕ್ಕೆ ವರ್ಗಾವಣೆ ಮಾಡಿರುವ ವಿಭಾಗೀಯ ಪೀಠವು “ಪ್ರಕರಣವನ್ನು 10 ವಾರಗಳಲ್ಲಿ ಪುನಃ ವಿಚಾರಣೆ ನಡೆಸಿ ಆದೇಶ ನೀಡಬೇಕು” ಎಂದು ನಿರ್ದೇಶಿಸಿದೆ.
ಪ್ರಕರಣದ ಹಿನ್ನೆಲೆ: ರಾಜ್ಯ ಸರ್ಕಾರವು 2022ರ ಜುಲೈ 28ರಂದು ಕನಿಷ್ಠ ವೇತನ ನಿಗದಿ ಕಾಯಿದೆ-1948ರ ಸೆಕ್ಷನ್ 3(1)(ಬಿ) ಮತ್ತು 5(1)(ಬಿ) ಅನ್ವಯ ಯಂತ್ರೋಪಕರಣ ಸಹಿತ ಮತ್ತು ರಹಿತರಾಗಿ ಫೌಂಡ್ರಿಯಲ್ಲಿ (ಲೋಹದ ಕುಲುಮೆ ಮತ್ತು ಅಚ್ಚಿನ ಕಾರ್ಖಾನೆಗಳು) ಕೆಲಸ ಮಾಡುವವರಿಗೆ ಕನಿಷ್ಠ ವೇತನ ನಿಗದಿ ಮಾಡಿ ಆದೇಶ ಹೊರಡಿಸಿತ್ತು.
ಇದನ್ನು ಪ್ರಶ್ನಿಸಿ ಅಖಿಲ ಭಾರತ ಟ್ರೇಡ್ ಯೂನಿಯನ್ ಕಾಂಗ್ರೆಸ್, ಕರ್ನಾಟಕ ರಾಜ್ಯ ಸಮಿತಿ ಮತ್ತು ಎಂಜಿನಿಯರಿಂಗ್ ಅಂಡ್ ಜನರಲ್ ವರ್ಕರ್ಸ್ ಯೂನಿಯನ್ ಮತ್ತಿತರ ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮೆಟ್ಟಿಲೇರಿದ್ದವು. ಈ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸರ್ಕಾರದ ಆದೇಶವನ್ನು ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಉದ್ಯೋಗದಾತ ಸಂಸ್ಥೆಗಳ ಪರ, ಕರ್ನಾಟಕ ಎಂಪ್ಲಾಯರ್ಸ್ ಅಸೋಸಿಯೇಷನ್ ಮೇಲ್ಮನವಿ ಸಲ್ಲಿಸಿ, ಏಕಸದಸ್ಯ ಪೀಠದ ಮುಂದೆ ನಮ್ಮನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ. ಸರ್ಕಾರ ವೇತನ ನಿಗದಿ ಮಾಡುವಾಗ ನಮ್ಮ ಅಭಿಪ್ರಾಯವನ್ನು ಆಲಿಸಿಲ್ಲ ಎಂದು ಆಕ್ಷೇಪಿಸಿತ್ತು.