ಮನೆ ಕಾನೂನು ಏಕರೂಪ ನಾಗರಿಕ ಸಂಹಿತೆ ಜಾರಿ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ, ನ್ಯಾಯಾಲಯದ ವ್ಯಾಪ್ತಿಗಲ್ಲ: ಸುಪ್ರೀಂಗೆ ಕೇಂದ್ರ

ಏಕರೂಪ ನಾಗರಿಕ ಸಂಹಿತೆ ಜಾರಿ ಸಂಸತ್ತಿನ ವ್ಯಾಪ್ತಿಗೆ ಬರುತ್ತದೆ, ನ್ಯಾಯಾಲಯದ ವ್ಯಾಪ್ತಿಗಲ್ಲ: ಸುಪ್ರೀಂಗೆ ಕೇಂದ್ರ

0

ಕೇಂದ್ರ ಸರ್ಕಾರ  ಏಕರೂಪ ನಾಗರಿಕ ಸಂಹಿತೆಯ (ಯುಸಿಸಿ) ಪರವಾಗಿದೆ. ಆದರೆ ಅದನ್ನು ಜಾರಿಗೊಳಿಸುವುದು ಸಂಸತ್ತಿನ ವ್ಯಾಪ್ತಿಗೆ ಬರುತ್ತದೆಯೇ ವಿನಾ ನ್ಯಾಯಾಲಯದ ವ್ಯಾಪ್ತಿಗಲ್ಲ ಎಂದು ಸಾಲಿಸಿಟರ್ ಜನರಲ್ (ಎಸ್’ಜಿ) ತುಷಾರ್ ಮೆಹ್ತಾ ಬುಧವಾರ ಸುಪ್ರೀಂ ಕೋರ್ಟ್’ಗೆ ತಿಳಿಸಿದರು.

ವಿಚ್ಛೇದನ, ಪಾಲನೆ, ಉತ್ತರಾಧಿಕಾರ ಹಾಗೂ ಜೀವನಾಂಶವನ್ನು ನಿಯಂತ್ರಿಸಲು ಲಿಂಗ ತಟಸ್ಥ ಮತ್ತು ಧರ್ಮ ತಟಸ್ಥ ಕಾನೂನುಗಳನ್ನು ಜಾರಿಗೆ ತರುವಂತೆ ಕೋರಿ ಬಿಜೆಪಿ ನಾಯಕ ಹಾಗೂ ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಮಾಡಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ಕೇಂದ್ರ ಈ ಪ್ರತಿಕ್ರಿಯೆ ನೀಡಿದೆ.

“ಏಕರೂಪ ನಾಗರಿಕ ಸಂಹಿತೆ ಅಪೇಕ್ಷಣೀಯವಾಗಿದೆ. ಆದರೆ ಇದು ಶಾಸಕಾಂಗಕ್ಕೆ ಸೇರಿದ ವಿಚಾರವಾಗಿದ್ದು. ರಿಟ್ ಅರ್ಜಿಯ ಆಧಾರದಲ್ಲಿ ಇದನ್ನು ನಿರ್ಧರಿಸಲು ಸಾಧ್ಯವಿಲ್ಲ” ಎಂದು ಸಾಲಿಸಿಟರ್ ಜನರಲ್ ತಿಳಿಸಿದರು.

ವಾದಕ್ಕೆ ಸಮ್ಮತಿ ಸೂಚಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಜೆ ಬಿ ಪರ್ದಿವಾಲಾ ಅವರಿದ್ದ ಪೀಠ ಕಾನೂನು ಜಾರಿಗೆ ತರುವಂತೆ ನ್ಯಾಯಾಲಯ ಸಂಸತ್ತಿಗೆ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದಿತು.

ಪ್ರಕರಣವನ್ನು ಪ್ರಸ್ತಾಪಿಸಲು ನ್ಯಾಯಾಲಯ ಸೂಕ್ತ ವೇದಿಕೆಯಲ್ಲ. ಯುಸಿಸಿ ಜಾರಿಗೊಳಿಸುವುದು ಸಂಸತ್ತಿಗೆ ಬಿಟ್ಟ ವಿಚಾರ ಎಂದು ಸಿಜೆಐ ಅರ್ಜಿದಾರರಿಗೆ ವಿವರಿಸಿದರು. ಇದೇ ವೇಳೆ ಅರ್ಜಿಯನ್ನು ಹಿಂಪಡೆಯುವುದಾಗಿ ಅರ್ಜಿದಾರ ಉಪಾಧ್ಯಾಯ ಅವರು ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು. “ನಿಮ್ಮ ಪರಿಹಾರಗಳನ್ನು ನೀವು ಮುಂದುವರಿಸಬಹುದು ಎಂದು ಹೇಳುತ್ತಿದ್ದೇವೆ. ಆದರೆ  ಪ್ರಕರಣವನ್ನು ವಿಲೇವಾರಿ ಮಾಡಿದ್ದೇವೆ” ಎಂದು ನ್ಯಾಯಾಲಯ ಹೇಳಿತು.

ಈ ವರ್ಷದ ಆರಂಭದಲ್ಲಿ, ಕೇಂದ್ರ ಸರ್ಕಾರ ಮನವಿಯನ್ನು ವಿರೋಧಿಸಿತ್ತು. ಅರ್ಜಿಗಳಲ್ಲಿ ಪ್ರಸ್ತಾಪಿಸಲಾದ ವಿಚಾರಗಳು ಶಾಸಕಾಂಗದ ವ್ಯಾಪ್ತಿಗೆ ಬರುತ್ತದೆ ಎಂದು ಅದು ಹೇಳಿತ್ತು. ಭಾರತದಲ್ಲಿ ಮದುವೆ ಮತ್ತು ವಿಚ್ಛೇದನಕ್ಕೆ ಏಕರೂಪ ಸಂಹಿತೆ ರೂಪಿಸುವಂತೆ ಕೇರಳ ಹೈಕೋರ್ಟ್ ಇತ್ತೀಚಿನ ದಿನಗಳಲ್ಲಿ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.