ಮನೆ ರಾಷ್ಟ್ರೀಯ ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್: 31 ನಕ್ಸಲರ ಹತ್ಯೆ, ಎಕೆ-47 ರೈಫಲ್ ಸೇರಿ ಭಾರಿ ಶಸ್ತ್ರಾಸ್ತ್ರ ವಶ

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್: 31 ನಕ್ಸಲರ ಹತ್ಯೆ, ಎಕೆ-47 ರೈಫಲ್ ಸೇರಿ ಭಾರಿ ಶಸ್ತ್ರಾಸ್ತ್ರ ವಶ

0

ನಾರಾಯಣಪುರ/ದಂತೇವಾಡ(ಛತ್ತೀಸ್‌ಗಢ): ಛತ್ತೀಸ್‌ಗಢದ ನಾರಾಯಣಪುರ ಮತ್ತು ದಂತೇವಾಡ ಗಡಿ ಪ್ರದೇಶಗಳಲ್ಲಿ ಇಂದು ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಇದುವರೆಗೆ 31 ಮಂದಿ ನಕ್ಸಲರು ಸಾವನ್ನಪ್ಪಿದ್ದಾರೆ ಎಂದು ಹಿರಿಯ ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

Join Our Whatsapp Group

ಭದ್ರತಾ ಪಡೆಗಳು ಅಬುಜ್ಮದ್ ಪ್ರದೇಶದ ಅರಣ್ಯದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾಗ ನಕ್ಸಲರು ಅಡಗಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು. ಜಾಡು ಹಿಡಿದು ಮುಂದೆ ಸಾಗುತ್ತಿದ್ದಂತೆ ನಕ್ಸಲರು ಗುಂಡಿನ ದಾಳಿ ಆರಂಭಿಸಿದ್ದಾರೆ. ಇದಕ್ಕುತ್ತರವಾಗಿ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

“ಶುಕ್ರವಾರ ಎನ್‌ಕೌಂಟರ್ ನಡೆದ ದಟ್ಟ ಅರಣ್ಯದಿಂದ ಇಂದು(ಶನಿವಾರ) ಬೆಳಗ್ಗೆ ಇನ್ನೂ ಮೂವರು ನಕ್ಸಲೀಯರ ಶವಗಳನ್ನು ಪತ್ತೆ ಮಾಡಲಾಗಿದೆ. ಇದರೊಂದಿಗೆ, ಎನ್‌ಕೌಂಟರ್‌ನಲ್ಲಿ ನಕ್ಸಲೀಯರ ಸಂಖ್ಯೆ 31 ಕ್ಕೆ ಏರಿದೆ. ನಕ್ಸಲರ ಗುರುತು ಇನ್ನೂ ಪತ್ತೆಯಾಗಿಲ್ಲ. ಆದರೆ ಪ್ರಾಥಮಿಕ ತನಿಖೆ ಪ್ರಕಾರ, ಅವರು ಪಿಎಲ್​ಜಿಎಗೆ (ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ) ಸೇರಿದ ಮಾವೋವಾದಿಗಳ ಪೂರ್ವ ಬಸ್ತಾರ್ ವಿಭಾಗದವರಾಗಿದ್ದಾರೆ” ಎಂದು ಪೊಲೀಸ್ ಮಹಾನಿರೀಕ್ಷಕ ಸುಂದರರಾಜ್ ಪಿ. ಮಾಹಿತಿ ನೀಡಿದ್ದಾರೆ.

”ಮೃತದೇಹಗಳ ಜೊತೆಗೆ, ಎಕೆ-47 ರೈಫಲ್, ಒಂದು ಎಸ್‌ಎಲ್‌ಆರ್ (ಸೆಲ್ಫ್ ಲೋಡಿಂಗ್ ರೈಫಲ್), ಒಂದು ಐಎನ್‌ಎಸ್‌ಎಎಸ್ ರೈಫಲ್, ಒಂದು ಎಲ್‌ಎಂಜಿ ರೈಫಲ್ ಮತ್ತು ಒಂದು 303 ರೈಫಲ್ ಸೇರಿದಂತೆ ಶಸ್ತ್ರಾಸ್ತ್ರಗಳ ಸಂಗ್ರಹವನ್ನು ಎನ್‌ಕೌಂಟರ್ ಸ್ಥಳದಿಂದ ವಶಪಡಿಸಿಕೊಳ್ಳಲಾಗಿದೆ” ಎಂದು ಐಜಿಪಿ ತಿಳಿಸಿದ್ದಾರೆ.

ಛತ್ತೀಸ್‌ಗಢ ಸಿಎಂ ಶ್ಲಾಘನೆ: ಯಶಸ್ವಿ ಕಾರ್ಯಾಚರಣೆ ನಡೆಸಿದ ಭದ್ರತಾ ಪಡೆಗಳನ್ನು ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಶ್ಲಾಘಿಸಿದ್ದಾರೆ. ‘ಡಬಲ್ ಇಂಜಿನ್’ ಸರ್ಕಾರ (ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರ) ನಕ್ಸಲ್ ಹಾವಳಿಯನ್ನು ತೊಡೆದುಹಾಕಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ.