ಮನೆ ರಾಜ್ಯ ಬೆಂಗಳೂರಲ್ಲಿ 60 ಕೋಟಿ ಮೌಲ್ಯದ 5 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು: ಈಶ್ವರ ಖಂಡ್ರೆ

ಬೆಂಗಳೂರಲ್ಲಿ 60 ಕೋಟಿ ಮೌಲ್ಯದ 5 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು: ಈಶ್ವರ ಖಂಡ್ರೆ

0

ಬೆಂಗಳೂರು: ಬೆಂಗಳೂರು ಬನಶಂಕರಿ ಬಳಿಯ ಬಿ.ಎಂ.ಕಾವಲ್ ಸರ್ವೆ ನಂ. 92ರಲ್ಲಿ ಒತ್ತವರಿ ಮಾಡಲಾಗಿದ್ದ ಸುಮಾರು 60 ಕೋಟಿ ರೂ. ಮೌಲ್ಯದ 5 ಎಕರೆ ಅರಣ್ಯಭೂಮಿಯನ್ನು ತೆರವು ಮಾಡಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

Join Our Whatsapp Group

ವಿಕಾಸಸೌಧದಲ್ಲಿಂದು ತಮ್ಮನ್ನು ಭೇಟಿ ಮಾಡಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,  ಕಳೆದ ವಾರ ಅರಣ್ಯ ಭವನದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಈಗಾಗಲೇ ಆದೇಶ ಆಗಿರುವ ಪ್ರಕರಣಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸುವಂತೆ ನೀಡಿದ್ದ ಸ್ಪಷ್ಟ ಸೂಚನೆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಾರ್ಯಪ್ರವೃತ್ತರಾದ ಬೆಂಗಳೂರು ಅರಣ್ಯಾಧಿಕಾರಿಗಳು 5.2 ಎಕರೆ ಒತ್ತುವರಿ ತೆರವು ಮಾಡಿಸಿರುವುದಾಗಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದರು.

ಬಿ.ಎಂ. ಕಾವಲ್ ವ್ಯಾಪ್ತಿಯ ಗೊಟ್ಟೆಗೆರೆಪಾಳ್ಯದ ವೆಂಕಟಪ್ಪ ಮತ್ತು ಅವರ ತಾಯಿ ತಿಮ್ಮಕ್ಕ ಎಂಬುವವರು 5 ಎಕರೆ 20 ಗುಂಟೆ ಅರಣ್ಯ ಭೂಮಿ ಒತ್ತುವರಿ ಮಾಡಿದ್ದರು. ಎ.ಸಿ.ಎಫ್. ನ್ಯಾಯಾಲಯದ ಆದೇಶದ ಮೇರೆಗೆ ಈ ಭೂಮಿ ತೆರವು ಮಾಡಲಾಗಿದೆ. ಈ ಸಂಬಂಧ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ಪ್ರತಿವಾದಿಗಳು ಹಾಕಿದ್ದ ದಾವೆ ವಜಾ ಆಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎಂದರು.