ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಈ ಹಿಂದೆ ಮಹದೇವಪುರ ವಲಯದಲ್ಲಿ ಮಳೆನೀರು ಚರಂಡಿ ಮತ್ತು ಕೆರೆ ಜಮೀನಿನಲ್ಲಿ ನಿರ್ಮಾಣವಾಗಿದ್ದ ಅನಧಿಕೃತ ಕಟ್ಟಡಗಳನ್ನು ತೆರವುಗೊಳಿಸಿದ್ದರೂ, ಪಟ್ಟಂದೂರು ಅಗ್ರಹಾರ ಕೆರೆಯ ಬಳಿ ಮಾಲೀಕರು ಮತ್ತು ಡೆವಲಪರ್‌ಗಳು ಅನಧಿಕೃತ ಬಡಾವಣೆಗೆ ಅಕ್ರಮ ರಸ್ತೆ ನಿರ್ಮಾಣ ಮಾಡಿದ್ದಾರೆ.
ಶ್ರೀ ಮುನೇಶ್ವರ ದೇವಸ್ಥಾನಕ್ಕೆ ರಸ್ತೆ ಮಾಡುವ ನೆಪದಲ್ಲಿ ಡೆವಲಪರ್‌ಗಳು ಇಂತಹ ರಸ್ತೆ ನಿರ್ಮಾಣದಲ್ಲಿ ತೊಡಗಿದ್ದಾರೆ ಎನ್ನುತ್ತಾರೆ ಕಾರ್ಯಕರ್ತರು. ಕಂದಾಯ ಇಲಾಖೆಯ ದಾಖಲೆಗಳ ಪ್ರಕಾರ, ಇಲ್ಲಿ ಹೇಳಲಾದ ರಸ್ತೆಯು ಕೇವಲ ‘ಕಾಲುದಾರಿ’ಯಾಗಿದೆ.
ನಮ್ಮ ವೈಟ್‌ಫೀಲ್ಡ್‌ನ ಸಂಚಾಲಕ ಸಂದೀಪ್ ಅನಿರುಧನ್ ಮಾತನಾಡಿ, ಪಟ್ಟಂದೂರು ಅಗ್ರಹಾರ ಕೆರೆಯನ್ನು ಈ ಹಿಂದೆ ಲ್ಯಾಂಡ್ ಡೆವಲಪರ್‌ಗಳು ಒತ್ತುವರಿ ಮಾಡಿಕೊಂಡಿದ್ದರು. ನಾಗರಿಕ ಸಮಾಜವು ಕೆರೆಯನ್ನು ಉಳಿಸಲು ನ್ಯಾಯಾಲಯದ ಮೆಟ್ಟಿಲೇರಿತು ಮತ್ತು ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿತು ಎನ್ನುತ್ತಾರೆ.
ತಹಶೀಲ್ದಾರ್ ಸಹಾಯ ಮಾಡಿದರು ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೂ ಭೂಕಬಳಿಕೆ ಪ್ರಕರಣವನ್ನು ದಾಖಲಿಸಿತು. ರಾಜ್ಯ ಸರ್ಕಾರವು ಅತಿಕ್ರಮಣದಾರರ ವಿರುದ್ಧ ಪ್ರಕರಣವನ್ನು ದಾಖಲಿಸಿತ್ತು ಮತ್ತು ಅವರ ಹಕ್ಕುಗಳಿಗೆ ತಡೆ ನೀಡಿತ್ತು. 2022ರಲ್ಲಿ ಕೆರೆಗೆ ಬೇಲಿ ಹಾಕಲು ಸರ್ಕಾರ ಒಂದು ಕೋಟಿ ರೂ. ಮಂಜೂರು ಮಾಡಿತ್ತು.
‘ಕಳೆದ ವಾರ್ಡ್ ಸಮಿತಿ ಸಭೆಗೆ ಬಂದಿದ್ದ ಕೆರೆ ಇಲಾಖೆಯ ಅಧಿಕಾರಿಗಳು, ಕಂದಾಯ ಇಲಾಖೆಯು ಕೆರೆಯ ಗಡಿಯ ಸರ್ವೆ ಪೂರ್ಣಗೊಳಿಸಿದ್ದು, ಈಗ ಸರ್ವೆ ಆಧರಿಸಿ ಬಿಬಿಎಂಪಿ ಕೆರೆ ವಿಭಾಗವು ಕೆರೆಯ ಜಾಗಕ್ಕೆ ಬೇಲಿ ಹಾಕುತ್ತದೆ. ಇದೀಗ ಕೆರೆಯ ಗಡಿಗೆ ಬೇಲಿ ಹಾಕುವುದಕ್ಕೂ ಮೊದಲೇ, ವೈಟ್‌ಫೀಲ್ಡ್‌ನ ಹೊಸ ಅನಧಿಕೃತ ಲೇಔಟ್‌ಗೆ ಸಂಪರ್ಕ ಕಲ್ಪಿಸಲು ಕೆರೆ ಬಫರ್ ವಲಯದಲ್ಲಿ ಅಕ್ರಮ ರಸ್ತೆಯನ್ನು ನಿರ್ಮಿಸಲು ಪ್ರಯತ್ನಿಸಲಾಗಿದೆ’ ಎಂದು ಅನಿರುಧನ್ ಆರೋಪಿಸಿದರು.
ವಿಷಯ ದೃಢಪಡಿಸಿದ ಬೆಂಗಳೂರು ಪೂರ್ವ ತಹಶೀಲ್ದಾರ್ ರವಿ ವೈ, ಶುಕ್ರವಾರ ಮಾಹಿತಿ ದೊರೆತ ಕೂಡಲೇ ಪರಿಶೀಲನೆ ನಡೆಸುವಂತೆ ಕಂದಾಯ ನಿರೀಕ್ಷಕ ಪಾರ್ಥ ಸಾರಥಿ ಅವರಿಗೆ ಸೂಚಿಸಿದರು. ‘ಆರ್‌ಐ ಸದ್ಯ ಅಲ್ಲಿನ ಅಕ್ರಮ ರಸ್ತೆ ಕಾಮಗಾರಿಯನ್ನು ನಿಲ್ಲಿಸಿದ್ದಾರೆ ಮತ್ತು ದಾಖಲೆಗಳನ್ನು ಒದಗಿಸುವಂತೆ ಡೆವಲಪರ್‌ಗಳನ್ನು ಕೇಳಿದ್ದಾರೆ. ಇದು ಖರಾಬ್ ಭೂಮಿ ಎಂದು ಅವರು ಹೇಳುತ್ತಿದ್ದಾರೆ. ಆದರೆ ನಾವು ದಾಖಲೆಗಳನ್ನು ಪರಿಶೀಲಿಸಬೇಕಾಗಿದೆ. ಆದರೆ, ಕೆರೆ ಬಫರ್ ವಲಯದಲ್ಲಿ ಯಾವುದೇ ರಸ್ತೆ ನಿರ್ಮಾಣಕ್ಕೆ ಅನುಮತಿ ನೀಡುವುದಿಲ್ಲ’ ಎಂದು ಅವರು ಹೇಳಿದರು.
ಅನಧಿಕೃತ ಲೇಔಟ್ ಆರೋಪದ ಬಗ್ಗೆ ಮಹದೇವಪುರ ವಲಯದ ಕಾರ್ಯಪಾಲಕ ಅಭಿಯಂತರರು ಪ್ರತಿಕ್ರಿಯಿಸಿ, ‘ತಹಶೀಲ್ದಾರ್ ಕ್ರಮಕೈಗೊಳ್ಳಬೇಕು. ಭೂ ಪರಿವರ್ತನೆ ಹಾಗೂ ಬಡಾವಣೆ ಅಭಿವೃದ್ಧಿ ಪಡಿಸಲು ಬಿಡಿಎ ನೀಡಿರುವ ಅನುಮೋದನೆಯನ್ನು ಕಂದಾಯ ಇಲಾಖೆಯು ಪರಿಶೀಲಿಸಬೇಕಿದೆ. ದಾಖಲೆಗಳು ಇಲ್ಲದಿದ್ದರೆ, ಲೇಔಟ್ ರಚನೆ ಕಾನೂನುಬಾಹಿರವಾಗಿದ್ದು, ಅದನ್ನು ತಡೆಯಬೇಕು ಎಂದರು.