ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಸೋಗಿನಲ್ಲಿ ಕೋಟ್ಯಂತರ ರೂಪಾಯಿ ಹಣ ಸುಲಿಗೆ ಮಾಡಿದ್ದ ಮುಂಬೈನ ಉದ್ಯಮಿ ಜಿತೇಂದ್ರ ನವ್ಲಾನಿ ವಿರುದ್ಧದ ತನಿಖೆಯನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ವರ್ಗಾಯಿಸುವಂತೆ ಜಾರಿ ನಿರ್ದೇಶನಾಲಯ (ಇ ಡಿ) ಬಾಂಬೆ ಹೈಕೋರ್ಟ್‌ಗೆ ಮನವಿ ಮಾಡಿದೆ [ಜಾರಿ ನಿರ್ದೇಶನಾಲಯ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].
ಖಾಸಗಿ ಕಂಪನಿಗಳಿಂದ 2015ರಿಂದ 2021ರ ಅವಧಿಯಲ್ಲಿ ₹ 58 ಕೋಟಿ ಸುಲಿಗೆ ಮಾಡಿದ ಆರೋಪದಡಿ ನವ್ಲಾನಿ ವಿರುದ್ಧ ಮಹಾರಾಷ್ಟ್ರದ ಭ್ರಷ್ಟಾಚಾರ ನಿಗ್ರಹ ದಳ ಎಫ್‌ಐಆರ್ ದಾಖಲಿಸಿತ್ತು. ಇ ಡಿ ಅಧಿಕಾರಿಗಳ ಸೋಗಿನಲ್ಲಿ ನವ್ಲಾನಿ ಹಣ ಸುಲಿಗೆ ಮಾಡುತ್ತಿದ್ದ ವಿಚಾರವನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿತ್ತು.
ಎಫ್‌ಐಆರ್‌ನಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳನ್ನು ಆರೋಪಿಗಳೆಂದು ಹೆಸರಿಸದಿದ್ದರೂ ಶಿವಸೇನೆಯ ಸಂಜಯ್ ರಾವುತ್ ರೀತಿಯ ಹಿರಿಯ ನಾಯಕರು ನೀಡಿರುವ ಹೇಳಿಕೆಗಳು ರಾಜ್ಯದ ತನಿಖೆ ನಿರ್ದಿಷ್ಟ ಉದ್ದೇಶದಿಂದ ಕೂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸುತ್ತವೆ ಎಂದು ಅರ್ಜಿ ತಿಳಿಸಿದೆ.
ಕೇಂದ್ರ ಪ್ಯಾನಲ್ ವಕೀಲ ಡಿ ಪಿ ಸಿಂಗ್ ಅವರ ಮೂಲಕ ಸಲ್ಲಿಸಿರುವ ಅರ್ಜಿಯಲ್ಲಿ “ಎಫ್‌ಐಆರ್ ದುರುದ್ದೇಶದಿಂದ ಕೂಡಿದ್ದು ಸರ್ಕಾರದೊಂದಿಗೆ ನಿಕಟ ಸಂಪರ್ಕದಲ್ಲಿರುವ ಮಂತ್ರಿಗಳ ವಿರುದ್ಧ ಆರಂಭಿಸಲಾಗಿದ್ದ ವಿವಿಧ ತನಿಖೆಗಳನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರ ನಡೆಸಿದ ಸ್ಪಷ್ಟ ಪ್ರಯತ್ನ ಇದು” ಎಂದು ಆರೋಪಿಸಲಾಗಿದೆ.
ಇ ಡಿ ಅಧಿಕಾರಿಗಳ ಹೆಸರಿನಲ್ಲಿ ಸುಲಿಗೆ ಮಾಡಿದ ಆರೋಪ ಎದುರಿಸುತ್ತಿರುವ ಜಿತೇಂದ್ರ ನವ್ಲಾನಿ, ಬಿಲ್ಡರ್ ಮತ್ತು ಹೋಟೆಲ್ ಉದ್ಯಮಿಯಾಗಿದ್ದು ಅಧಿಕಾರಿಗಳು ರಾಜಕಾರಣಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ. ಜೊತೆಗೆ ಮುಂಬೈ ಮಾಜಿ ಪೊಲೀಸ್ ಕಮಿಷನರ್ ಪರಮ್ ಬೀರ್ ಸಿಂಗ್ ಅವರೊಂದಿಗೂ ನವ್ಲಾನಿಗೆ ನಂಟಿತ್ತು ಎನ್ನಲಾಗಿದೆ. ಪನಾಮ ಪೇಪರ್ ಸೋರಿಕೆ ಹಗರಣದಲ್ಲಿ ಕೂಡ ನವ್ಲಾನಿ ಹಾಗೂ ಅವರ ತಾಯಿಯ ಹೆಸರು ಉಲ್ಲೇಖವಾಗಿತ್ತು.