ಮೈಸೂರು (Mysuru): ವಿಧಾನ ಪರಿಷತ್ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಯ ಮತ ಎಣಿಕೆ ನಾಳೆ ನಡೆಯಲಿದೆ.
ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮೈಸೂರು ನಗರ ವ್ಯಾಪ್ತಿಯಲ್ಲಿ ಕಲಂ 144 ಸಿಆರ್‌ಪಿಸಿ ರೀತ್ಯಾ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಮತ ಎಣಿಕೆ ಕೇಂದ್ರದ ಬಳಿ ಹಾಗೂ ಮತ ಎಣಿಕೆಯಾದ ನಂತರ ಮೈಸೂರು ನಗರದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದಿರಲು ಸಾರ್ವಜನಿಕ ನೆಮ್ಮದಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಡಿಯಿಂದ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಜಯಶಾಲಿಯಾದ ಅಭ್ಯರ್ಥಿಗಳ ವಿಜಯೋತ್ಸವ ಮೆರವಣಿಗೆ, ಪಟಾಕಿಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳ ಮುಂದೆ ಸಿಡಿಸುವುದು, ಮತ ಎಣಿಕೆ ಕೇಂದ್ರದಲ್ಲಿ ಅನಧಿಕೃತ ವ್ಯಕ್ತಿಗಳ ಪ್ರವೇಶ ಹಾಗೂ ಮತ ಎಣಿಕೆ ಕೇಂದ್ರದ 200 ಮೀ. ವ್ಯಾಪ್ತಿ ಪ್ರದೇಶದ ಸುತ್ತಲೂ 5 ಮಂದಿಗಿಂತ ಹೆಚ್ಚು ಗುಂಪುಗೂಡುವುದು, ಸಭೆ ಸಮಾರಂಭಗಳನ್ನು ನಡೆಸುವುದು, ಯಾವುದೇ ವ್ಯಕ್ತಿ ತನ್ನೊಂದಿಗೆ ಸ್ಪೋಟಕ ವಸ್ತು ಮತ್ತು ಮಾರಕಾಸ್ತ್ರಗಳನ್ನು ಒಯ್ಯವುದು, ಮೆರವಣಿಗೆ ನಡೆಸುವುದು ಹಾಗೂ ಪ್ರಚೋದನಕಾರಿ ಭಾಷಣ ಮಾಡುವುದನ್ನು ನಿಷೇಧಿಸಲಾಗಿದೆ.
ಮದುವೆ ಸಮಾರಂಭಗಳಿಗೆ, ಧಾರ್ಮಿಕ ಮತ್ತು ಶವಸಂಸ್ಕಾರಗಳಿಗೆ ಹಾಗೂ ಶಾಲಾ ಕಾಲೇಜು ಪರೀಕ್ಷೆಗೆ ತೆರಳುವವರಿಗೆ ಇದು ಅನ್ವಯಿಸುವುದಿಲ್ಲ ಎಂದು ಪೊಲೀಸ್ ಅಯುಕ್ತರಾದ ಡಾ. ಚಂದ್ರಗುಪ್ತ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.