ಮನೆ ಕಾನೂನು ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿ, ಶುಲ್ಕ ಸಂಗ್ರಹಣೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ದಾಖಲಾತಿ, ಶುಲ್ಕ ಸಂಗ್ರಹಣೆ: ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್‌

0

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳ ದಾಖಲಾತಿ, ಶುಲ್ಕ ಸಂಗ್ರಹಣೆಗೆ ಸಂಬಂಧಿಸಿದಂತೆ ಸರ್ಕಾರ ಹೊರಡಿಸಿರುವ ಸುತ್ತೋಲೆ ಆಕ್ಷೇಪಿಸಿ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.

Join Our Whatsapp Group

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳ ಒಕ್ಕೂಟ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ಸುನಿಲ್‌ ದತ್ ಯಾದವ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಕೆಲ ಕಾಲ ವಾದ ಆಲಿಸಿದ ಪೀಠವು ಶಿಕ್ಷಣ ಇಲಾಖೆ ಕಾರ್ಯದರ್ಶಿ ಹಾಗೂ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೇ, ಸುತ್ತೋಲೆಗೆ ತಡೆ ನೀಡಬೇಕು ಎಂಬ ಅರ್ಜಿದಾರರ ಮನವಿಯನ್ನು ಮುಂದಿನ ವಿಚಾರಣೆ ವೇಳೆ ಪರಿಗಣಿಸಲಾಗುವುದು. ಅಷ್ಟರೊಳಗೆ ಅಗತ್ಯ ಮಾಹಿತಿ ಪಡೆದು ನ್ಯಾಯಾಲಯಕ್ಕೆ ಒದಗಿಸಬೇಕು. ಏಕೆಂದರೆ, ಇದು ಇತರ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೂ ಸಮಸ್ಯೆ ತಂದೊಡ್ಡಲಿದೆ ಎಂದು ಸರ್ಕಾರದ ಪರ ವಕೀಲರಿಗೆ ಸೂಚನೆ ನೀಡಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿತು. ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್ ವಾದಿಸಿದರು.

ಶಿಕ್ಷಣ ಹಕ್ಕು ಕಾಯಿದೆ-2009ರ ಸೆಕ್ಷನ್ 2(ಬಿ)ರಂತೆ ಎಲ್ಲಾ ಖಾಸಗಿ ಶಾಲೆಗಳು 2024-25ನೇ ಶೈಕ್ಷಣಿಕ ಸಾಲಿನ ಶುಲ್ಕವನ್ನು ತಮ್ಮ ಶಾಲೆಯ ವೆಬ್‌ಸೈಟ್‌ನಲ್ಲಿ ಶಾಲಾ ಸೂಚನ ಫಲಕದಲ್ಲಿ ಮತ್ತು ಇಲಾಖಾ ವೆಬ್‌ಸೈಟ್‌ನಲ್ಲಿ (ಎಸ್‌ಎಟಿಎಸ್) ಸಾರ್ವಜನಿಕರು ಮತ್ತು ಪೋಷಕರಿಗೆ ಲಭ್ಯವಾಗುವಂತೆ ಪ್ರಕಟಿಸಲು ಹಾಗೂ ಶುಲ್ಕ ವಸೂಲಾತಿ ಮತ್ತು ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್‌ಟಿಇ ಕಾಯಿದೆ ಸೆಕ್ಷನ್ 13ಅನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು 2024ರ ಮೇ 20ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಈ ಸುತ್ತೋಲೆಯನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

ಶಿಕ್ಷಣ ಹಕ್ಕು ಕಾಯಿದೆ ಖಾಸಗಿ ಮತ್ತು ಅನುದಾನಿತ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹೀಗಿದ್ದಾಗ, ಆರ್‌ಟಿಇ ಕಾಯಿದೆ ಅಡಿ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಅನ್ವಯ ಆಗುವುದಿಲ್ಲ. ಅಲ್ಲದೇ ಕರ್ನಾಟಕ ಶಿಕ್ಷಣ ಕಾಯಿದೆ-1993ರ ಸೆಕ್ಷನ್ 141ಕ್ಕೂ ಇದು ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಆದ್ದರಿಂದ, ಶಿಕ್ಷಣ ಇಲಾಖೆ 2024ರ ಮೇ 20ರಂದು ಹೊರಡಿಸಿರುವ ಸುತ್ತೋಲೆ ಆಕ್ಷೇಪಿಸಿ ಅರ್ಜಿದಾರರು 2024ರ ಮೇ 30ರಂದು ನೀಡಿರುವ ಮನವಿಯವನ್ನು ಪರಿಗಣಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಜೊತೆಗೆ ಅರ್ಜಿ ಇತ್ಯರ್ಥ ಆಗುವ ತನಕ ಮೇ 20ರ ಸುತ್ತೋಲೆಗೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಸಿಮೀತವಾಗಿ ತಡೆ ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ಹಿಂದಿನ ಲೇಖನಕೋಲಾರ: ಶ್ರೀಗಂಧದ ಮರ ಕಳವಿಗೆ ಬಂದಿದ್ದವರ ಮೇಲೆ ಫೈರಿಂಗ್
ಮುಂದಿನ ಲೇಖನನೂತನ ಅಪರಾಧಿಕ ಕಾನೂನುಗಳು: ದಾಖಲಾದ 3 ವರ್ಷಗಳಲ್ಲಿ ಪ್ರಕರಣ ಇತ್ಯರ್ಥ- ಗೃಹ ಸಚಿವ ಅಮಿತ್ ಶಾ