ಮನೆ ರಾಷ್ಟ್ರೀಯ ಅಭಿವೃದ್ಧಿ ಹೊಂದಿದ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ ಮೋದಿ

ಅಭಿವೃದ್ಧಿ ಹೊಂದಿದ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ: ಪ್ರಧಾನಿ ಮೋದಿ

0

ನವದೆಹಲಿ (New Delhi): ಅಭಿವೃದ್ಧಿ ಹೊಂದಿದ ದೇಶಗಳಿಂದ ಪರಿಸರಕ್ಕೆ ದೊಡ್ಡ ಹಾನಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಶ್ವ ಪರಿಸರ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ‘ಮಣ್ಣು ಉಳಿಸಿ ಆಂದೋಲನ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈಶಾ ಫೌಂಡೇಶನ್‌ನ ಸಂಸ್ಥಾಪಕರಾದ ಸದ್ಗುರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹವಾಮಾನ ಬದಲಾವಣೆಯಲ್ಲಿ ಭಾರತದ ಪಾತ್ರ ನಗಣ್ಯವಾಗಿರುವ ಸಂದರ್ಭದಲ್ಲಿ ಭಾರತ ಈ ಪ್ರಯತ್ನ ಮಾಡುತ್ತಿದೆ. ಪ್ರಪಂಚದ ಅಭಿವೃದ್ಧಿ ಹೊಂದಿದ ಆಧುನಿಕ ದೇಶಗಳು ಗರಿಷ್ಠ ಪ್ರಮಾಣದಲ್ಲಿ ಇಂಗಾಲದ ಹೊರಸೂಸುವಿಕೆಗೆ  ಅವರೇ ಹೊಣೆ ಎಂದು ಪ್ರಧಾನಿ ದೂರಿದರು.

ಮಣ್ಣನ್ನು ಜೀವಂತವಾಗಿಡಲು ದೇಶವು ನಿರಂತರವಾಗಿ ಶ್ರಮಿಸುತ್ತಿದೆ. ಮಣ್ಣನ್ನು ಉಳಿಸಲು, ಐದು ಮುಖ್ಯ ವಿಷಯಗಳ ಮೇಲೆ ಕೇಂದ್ರೀಕರಿಸಿದ್ದೇವೆ ಎಂದ ಪ್ರಧಾನಿ, ಮೊದಲನೆಯದಾಗಿ- ಮಣ್ಣನ್ನು ರಾಸಾಯನಿಕ ಮುಕ್ತವನ್ನಾಗಿ ಮಾಡುವುದು ಹೇಗೆ? ಎರಡನೆಯದು- ಮಣ್ಣಿನಲ್ಲಿ ವಾಸಿಸುವ ಜೀವಿಗಳನ್ನು ಹೇಗೆ ಉಳಿಸುವುದು?, ಇದನ್ನು ತಾಂತ್ರಿಕ ಭಾಷೆಯಲ್ಲಿ ಮಣ್ಣಿನ ಸಾವಯವ ವಸ್ತು ಎಂದು ಕರೆಯುತ್ತೀರಿ. ಮೂರನೆಯದು- ಮಣ್ಣಿನ ತೇವಾಂಶವನ್ನು ಹೇಗೆ ಕಾಪಾಡಿಕೊಳ್ಳುವುದು? ನಾಲ್ಕನೆಯದಾಗಿ ಕಡಿಮೆ ಅಂತರ್ಜಲದಿಂದ ಮಣ್ಣಿಗೆ ಆಗುತ್ತಿರುವ ಹಾನಿಯನ್ನು ಹೇಗೆ ತಡೆಯುವುದು ಮತ್ತು ಐದನೆಯದಾಗಿ, ಅರಣ್ಯದ ವ್ಯಾಪ್ತಿಯ ಕಡಿತದಿಂದ ಮಣ್ಣಿನ ನಿರಂತರ ಸವೆತವನ್ನು ಹೇಗೆ ನಿಲ್ಲಿಸುವುದು ಹೇಗೆ ಅನ್ನೋದರ ಬಗ್ಗೆ ಕೇಂದ್ರ ಸರಕಾರ ತನ್ನ ದೃಷ್ಟಿಯನ್ನು ಕೇಂದ್ರಿಕರಿಸಿದೆ ಎಂದು ಪ್ರಧಾನಿ ತಿಳಿಸಿದರು.

ಈ ಹಿಂದೆ ನಮ್ಮ ದೇಶದ ರೈತನಿಗೆ ಯಾವ ರೀತಿಯ ಮಣ್ಣು, ಅವನ ಮಣ್ಣಿನ ಕೊರತೆ ಏನು, ಎಷ್ಟು ಇದೆ ಎಂಬ ಮಾಹಿತಿಯ ಕೊರತೆ ಇತ್ತು ಎಂದು ಪ್ರಧಾನಿ ಮೋದಿ ಹೇಳಿದರು. ಈ ಸಮಸ್ಯೆಯನ್ನು ಹೋಗಲಾಡಿಸಲು, ದೇಶದ ರೈತರಿಗೆ ಮಣ್ಣಿನ ಆರೋಗ್ಯ ಕಾರ್ಡ್ ನೀಡಲು ಬೃಹತ್ ಅಭಿಯಾನವನ್ನು ಪ್ರಾರಂಭಿಸಲಾಯಿತು. ದೇಶಾದ್ಯಂತ 22 ಕೋಟಿಗೂ ಹೆಚ್ಚು ಮಣ್ಣಿನ ಆರೋಗ್ಯ ಕಾರ್ಡ್‌ಗಳನ್ನು ರೈತರಿಗೆ ನೀಡಲಾಗಿದೆ. ಇದರಿಂದ ರೈತರಿಗೆ ಶೇ.8ರಿಂದ 10ರಷ್ಟು ವೆಚ್ಚ ಉಳಿತಾಯವಾಗಿದ್ದು, ಇಳುವರಿಯಲ್ಲಿ ಶೇ.5ರಿಂದ 6ರಷ್ಟು ಹೆಚ್ಚಳವಾಗಿದೆ ಎಂದರು.

ಇಂದು ದೇಶ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಈ ಅಮೃತ ಕಾಲದಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳುತ್ತಿದೆ. ಹಾಗಾಗಿ ಈ ರೀತಿಯ ಸಾರ್ವಜನಿಕ ಅಭಿಯಾನ ಬಹಳ ಮುಖ್ಯವಾಗುತ್ತದೆ. ಕಳೆದ 8 ವರ್ಷಗಳಿಂದ ದೇಶದಲ್ಲಿ ನಡೆಯುತ್ತಿರುವ ಎಲ್ಲಾ ಯೋಜನೆಗಳು ಒಂದಲ್ಲ ಒಂದು ರೀತಿಯಲ್ಲಿ ಪರಿಸರವನ್ನು ಸಂರಕ್ಷಿಸುವ ಹಂಬಲವನ್ನು ಹೊಂದಿವೆ ಎಂಬ ತೃಪ್ತಿ ನನಗಿದೆ ಎಂದರು.

ಸ್ವಚ್ಛ ಭಾರತ್ ಮಿಷನ್, ತ್ಯಾಜ್ಯವನ್ನು ಸಂಪತ್ತಾಗಿಸುವ ಕಾರ್ಯಕ್ರಮಗಳು, ಅಮೃತ್ ಮಿಷನ್ ಅಡಿ ನಗರಗಳಲ್ಲಿ ಆಧುನಿಕ ಒಳಚರಂಡಿ ಸಂಸ್ಕರಣಾ ಘಟಕಗಳ ನಿರ್ಮಾಣ, ಸಿಂಗಲ್ ಯೂಸ್ ಪ್ಲಾಸ್ಟಿಕ್‌ಗಳನ್ನು ಬಳಸಿ ಪರಿಸರವನ್ನು ರಕ್ಷಿಸುವ ಭಾರತದ ಬಹು ಆಯಾಮಗಳಾಗಿವೆ ಎಂದು ಪ್ರಧಾನಿ ತಿಳಿಸಿದರು.