ಎಲ್ಲಾ ಹೈಕೋರ್ಟ್ ನ್ಯಾಯಮೂರ್ತಿಗಳು ಒಂದೇ ವರ್ಗದ ಅಧಿಕಾರಿಗಳಾಗಿರುವುದರಿಂದ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಸೇರಿದಂತೆ ಸಮಾನ ಸೇವಾ ಸೌಲಭ್ಯಗಳನ್ನು ಅವರಿಗೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದೆ.
ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳಿಗೆ ಬೇರೆ ಬೇರೆ ಪಿಂಚಣಿ ಸೌಲಭ್ಯ ನೀಡುವುದು ಹೇಗೆ ಸಾಧ್ಯ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ಪ್ರಶ್ನಿಸಿತು.
“ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಹೇಗೆ ನೇಮಕ ಮಾಡಬೇಕು ಎಂಬುದರ ಕುರಿತು 216ನೇ ವಿಧಿ ಭೇದ ಉಂಟು ಮಾಡುವುದಿಲ್ಲ. ಒಮ್ಮೆ ಹೈಕೋರ್ಟ್‌ಗೆ ನೇಮಕಗೊಂಡ ನಂತರ, ಎಲ್ಲಾ ನ್ಯಾಯಮೂರ್ತಿಗಳು ಸಮಾನ ಶ್ರೇಣಿ ಪಡೆಯುತ್ತಾರೆ. ಹೈಕೋರ್ಟ್ ಸಂಸ್ಥೆ ಮುಖ್ಯ ನ್ಯಾಯಮೂರ್ತಿ ಮತ್ತು ನೇಮಕಗೊಂಡ ಇತರ ಎಲ್ಲಾ ನ್ಯಾಯಮೂರ್ತಿಗಳನ್ನು ಒಳಗೊಂಡಿರುತ್ತದೆ. ವೇತನ ಪಾವತಿ ಅಥವಾ ಇನ್ನಿತರ ಸೌಲಭ್ಯಗಳ ಕುರಿತಂತೆ ಯಾವುದೇ ವ್ಯತ್ಯಾಸ ಮಾಡುವಂತಿಲ್ಲ” ಎಂದು ಪೀಠ ಹೇಳಿತು.
ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರ ಬಾಕಿ ಉಳಿದಿರುವ ವೇತನ ಮತ್ತು ಅವರು ಎದುರಿಸುತ್ತಿರುವ ಪಿಂಚಣಿ ಸಮಸ್ಯೆಗಳಿಗೆ ಸಂಬಂಧಿಸಿದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಜನರಲ್ ಪ್ರಾವಿಡೆಂಟ್ ಫಂಡ್ (ಜಿಪಿಎಫ್) ಖಾತೆ ಇಲ್ಲದ ಕಾರಣ ಹತ್ತು ತಿಂಗಳಿನಿಂದ ಸಂಬಳ ಪಡೆಯದ ಪಾಟ್ನಾ ಹೈಕೋರ್ಟ್ ನ್ಯಾಯಮೂರ್ತಿ ರುದ್ರ ಪ್ರಕಾಶ್ ಮಿಶ್ರಾ ಅವರ ಬಾಕಿ ಉಳಿದಿರುವ ವೇತನವನ್ನು ಬಿಡುಗಡೆ ಮಾಡುವಂತೆ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್ ಬಿಹಾರ ರಾಜ್ಯಕ್ಕೆ ನಿರ್ದೇಶನ ನೀಡಿತ್ತು.
ಸೇವಾ ಸೌಲಭ್ಯಗಳಲ್ಲಿ ಮಾಡುವ ಯಾವುದೇ ವ್ಯತ್ಯಾಸ ಹೈಕೋರ್ಟ್ ನ್ಯಾಯಮೂರ್ತಿಗಳು ಒಂದೇ ಎಂಬ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದು ನ್ಯಾಯಾಲಯ ಇಂದು ಹೇಳಿದೆ. ಹಾಗೆ ವೇತನ ನೀಡದೆ ತಾರತಮ್ಯ ಉಂಟುಮಾಡುವುದು ಅಸಾಂವಿಧಾನಿಕ ಎಂದು ಅದು ಹೇಳಿದೆ.