ಕ್ರೈಸ್ಟ್‌ಚರ್ಚ್ (Christchurch): ನ್ಯೂಜಿಲೆಂಡ್‌ನ ಪುರುಷ ಕ್ರಿಕೆಟಿಗರಿಗೆ ಲಭಿಸುವಷ್ಟೇ ವೇತನವನ್ನು ಮಹಿಳಾ ಕ್ರಿಕೆಟ್ ತಂಡದ ಸದಸ್ಯರಿಗೂ ನೀಡುವ ಮಹತ್ವದ ನಿರ್ಧಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ತೆಗೆದುಕೊಂಡಿದೆ.
ನ್ಯೂಜಿಲೆಂಡ್ ಕ್ರಿಕೆಟ್‌ನಲ್ಲಿ ನಡೆದಿರುವ ಅತ್ಯಂತ ಪ್ರಮುಖ ಒಡಂಬಡಿಕೆ ಇದಾಗಿದೆ. ನ್ಯೂಜಿಲೆಂಡ್ ಕ್ರಿಕೆಟ್ ಮತ್ತು ಆಟಗಾರರನ್ನು ಪ್ರತಿನಿಧಿಸುವ ಸಂಸ್ಥೆಯು ಇದಕ್ಕೆ ಸಂಬಂಧಿಸಿದಂತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿವೆ.
ಇಂತಹ ಮಹತ್ವದ ಒಪ್ಪಂದ ಜಾರಿಯಾಗಲು ಕಾರಣರಾದ ಆಟಗಾರರು ಮತ್ತು ಎಲ್ಲ ಪ್ರಮುಖ ಸಂಸ್ಥೆಗಳನ್ನು ನಾನು ಅಭಿನಂದಿಸುತ್ತೇನೆ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮುಖ್ಯಸ್ಥ ಡೇವಿಡ್ ವೈಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಒಪ್ಪಂದವು ನ್ಯೂಜಿಲೆಂಡ್ ಕ್ರಿಕೆಟ್, ವಿವಿಧ ಸಂಸ್ಥೆಗಳು ಮತ್ತು ಆಟಗಾರರನ್ನು ಪರಸ್ಪರ ಬೆಸೆದು, ಮಹಿಳಾ ಕ್ರಿಕೆಟ್‌ನ ಬೆಳವಣಿಗೆಗೆ ನೆರವಾಗಲಿದೆ ಎಂದಿದ್ದಾರೆ.
ನ್ಯೂಜಿಲೆಂಡ್ ಕ್ರಿಕೆಟ್, ದೇಶದ ಆರು ಪ್ರಮುಖ ಸಂಸ್ಥೆಗಳು ಮತ್ತು ನ್ಯೂಜಿಲೆಂಡ್ ಕ್ರಿಕೆಟ್ ಆಟಗಾರರ ಸಂಸ್ಥೆಯ ನಡುವಿನ ಒಪ್ಪಂದದಂತೆ ರಾಷ್ಟ್ರೀಯ ತಂಡ ಮತ್ತು ದೇಸಿ ಕ್ರಿಕೆಟ್‌ನಲ್ಲಿ ಆಡುವ ಮಹಿಳಾ ಕ್ರಿಕೆಟಿಗರು ಪ್ರತಿ ಪಂದ್ಯಕ್ಕೆ ಪುರುಷರು ಪಡೆಯುವಷ್ಟೇ ವೇತನ ಪಡೆಯಲಿದ್ದಾರೆ. ಕ್ರಿಕೆಟ್‌ನ ಎಲ್ಲ ಮೂರು ಮಾದರಿಗಳಿಗೂ (ಟೆಸ್ಟ್, ಏಕದಿನ ಮತ್ತು ಟಿ20) ಈ ಒಪ್ಪಂದ ಅನ್ವಯವಾಗಲಿದೆ.