ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಖಾಸಗಿ ಕೈಗಾರಿಕೆ ಮತ್ತು ಹೂಡಿಕೆ ಸಲಹೆಗಾರ, ಪ್ರಸಿದ್ಧ ಕೈಗಾರಿಕೋದ್ಯಮಿ ಸಲ್ಮಾನ್ ಫಜ್ಲುರ್ ರಹಮಾನ್ ಹಾಗೂ ಮಾಜಿ ಕಾನೂನು ಸಚಿವ ಅನಿಸುಲ್ ಹಖ್ ಅವರನ್ನು ಬಾಂಗ್ಲಾ ಪೊಲೀಸರು ಮಂಗಳವಾರ (ಆ.13) ರಾತ್ರಿ ಬಂಧಿಸಿರುವುದಾಗಿ ವರದಿ ತಿಳಿಸಿದೆ.
ದೇಶದಲ್ಲಿ ಸ್ವಾತಂತ್ರ್ಯ ಕುಟುಂಬ ಸದಸ್ಯರಿಗೆ ಶೇ.30ರಷ್ಟು ಮೀಸಲಾತಿ ಜಾರಿಗೊಳಿಸಿದ್ದನ್ನು ವಿರೋಧಿಸಿ ವಿದ್ಯಾರ್ಥಿಗಳ ನೇತೃತ್ವದ ಪ್ರತಿಭಟನೆ ತೀವ್ರ ಹಿಂಸಾಚಾರಕ್ಕೆ ತಿರುಗಿದ ನಂತರ ಶೇಖ್ ಹಸೀನಾ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಭಾರತಕ್ಕೆ ಪರಾರಿಯಾಗಿದ್ದರು.
ಇದೀಗ ಬಾಂಗ್ಲಾದಲ್ಲಿ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷದ ಪ್ರಭಾವಿ ಸದಸ್ಯರು, ಉದ್ಯಮಿಗಳನ್ನು ಬಂಧಿಸಲಾಗುತ್ತಿದೆ ಎಂದು ವರದಿ ವಿವರಿಸಿದೆ. ಢಾಕಾ ಕಾಲೇಜು ಮುಂಭಾಗದಲ್ಲಿ ಜುಲೈ 16ರಂದು ನಡೆದ ಪೊಲೀಸರು ಹಾಗೂ ಬೀದಿ ವ್ಯಾಪಾರಸ್ಥರ ನಡುವೆ ನಡೆದ ಘರ್ಷಣೆಯಲ್ಲಿ ವಿದ್ಯಾರ್ಥಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರಹಮಾನ್ ಮತ್ತು ಹಖ್ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.
ರಹಮಾನ್ ಹಾಗೂ ಹಖ್ ಢಾಕಾದ ಸದಾರ್ ಘಾಟ್ ನಲ್ಲಿ ಬೋಟ್ ಮೂಲಕ ದೇಶ ಬಿಟ್ಟು ಪರಾರಿಯಾಗಲು ಯತ್ನಿಸಿದ ಸಂದರ್ಭದಲ್ಲಿ ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.