ಮನೆ ರಾಜ್ಯ ವಿದ್ಯುನ್ಮಾನ ಉಪಕರಣ ತಯಾರಕರಿಗೆ ಹೊಣೆಗಾರಿಕೆ ಹೆಚ್ಚಿಸಲು ಈಶ್ವರ ಖಂಡ್ರೆ ಸೂಚನೆ

ವಿದ್ಯುನ್ಮಾನ ಉಪಕರಣ ತಯಾರಕರಿಗೆ ಹೊಣೆಗಾರಿಕೆ ಹೆಚ್ಚಿಸಲು ಈಶ್ವರ ಖಂಡ್ರೆ ಸೂಚನೆ

0

ಬೆಂಗಳೂರು: ರಾಜ್ಯದಲ್ಲಿ ವಿದ್ಯುನ್ಮಾನ ಉಪಕರಣ ತಯಾರಕರಿಗೆ (Extended Producer Responsibility-EPR) ವಿಸ್ತರಿತ ಹೊಣೆಗಾರಿಕೆ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.


ವಿಕಾಸಸೌಧದಲ್ಲಿಂದು ಇ-ತ್ಯಾಜ್ಯ ಸಂಸ್ಕರಣೆದಾರರು/ ಮರುಬಳಕೆದಾರರ (Refurbishers /Recyclers) ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಸಚಿವರು ಇ- ತ್ಯಾಜ್ಯ ನಿರ್ವಹಣೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಿದರು.
ಇರುವುದು ಇದೊಂದೇ ಭೂಮಿ, ಈ ಭೂಮಿಯನ್ನು ತ್ಯಾಜ್ಯದ ಗುಂಡಿ ಮಾಡಬಾರದು, ಇ-ತ್ಯಾಜ್ಯ ಅಪಾಯಕಾರಿಯಾಗಿದ್ದು, ಇದನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಬೇಕು, ಮುಂದಿನ ಪೀಳಿಗೆಯ ಮತ್ತು ಸಮುದಾಯ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಹೆಚ್ಚು ಜಾಗರೂಕತೆಯಿಂದ ಮತ್ತು ವೈಜ್ಞಾನಿಕವಾಗಿ ಇವುಗಳ ಪುನರ್ ಬಳಕೆ ಮತ್ತು ನಿರ್ವಹಣೆ ಮಾಡುವಂತೆ ಸೂಚಿಸಿದರು.
ದೇಶದಲ್ಲಿ ವಾರ್ಷಿಕ 3.8 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಈ ಪೈಕಿ ರಾಜ್ಯದಲ್ಲಿ 0.8 ಮಿಲಿಯನ್ ಮೆಟ್ರಿಕ್ ಟನ್ ಅಷ್ಟು ಇ-ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ರಾಜ್ಯ ಮೂರನೇ ಸ್ಥಾನದಲ್ಲಿದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುವಂತೆ ತಿಳಿಸಿದರು.
ರಾಜ್ಯದಲ್ಲಿ ಒಟ್ಟು 108 ಇ-ತ್ಯಾಜ್ಯ ಸಂಸ್ಕರಣಾ ಘಟಕಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿದ್ದು,
2019-20ರ ಸಾಲಿನಲ್ಲಿ 44240.10 ಮೆ.ಟನ್, 2020-2021ರಲ್ಲಿ 95,175.17 ಮೆಟ್ರಿಕ್ ಟನ್ ಮತ್ತು 2021-2022ರಲ್ಲಿ 1,11,589.92 ಮೆಟ್ರಿಕ್ ಟನ್ ಇ-ತ್ಯಾಜ್ಯ ಮಾತ್ರವೇ ಸಂಸ್ಕರಣೆ ಮರುಬಳಕೆ ಆಗಿದೆ. ಬೆಂಗಳೂರು ಸಿಲಿಕಾನ್ ಕಣಿವೆಯಾಗಿದ್ದು, ಇಲ್ಲಿ ಹೆಚ್ಚಿನ ವಿದ್ಯುನ್ಮಾನ ಉಪಕರಣ ಬಳಕೆಯಾಗುತ್ತದೆ. ಉತ್ಪಾದನೆ ಆಗುತ್ತದೆ. ಇದನ್ನು ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರೆ ಮುಂದಿನ ದಿನಗಳಲ್ಲಿ ಕಠಿಣ ಪರಿಸ್ಥಿತಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಾಗೃತಿ ಮೂಡಿಸಲು ಸೂಚನೆ:
ಜನರಿಗೆ ಇ-ತ್ಯಾಜ್ಯದಿಂದ ಆಗುವ ತೊಂದರೆಗಳ ಬಗ್ಗೆ ವಿವರಿಸುವ ಅಗತ್ಯವಿದೆ. ಇ-ತ್ಯಾಜ್ಯ ಸಂಸ್ಕರಣೆಯನ್ನು ಹೇಗೆ ವೈಜ್ಞಾನಿಕವಾಗಿ ಮಾಡಬೇಕು ಎಂಬ ಬಗ್ಗೆಯೂ ತಿಳಿಯಪಡಿಸಿ. ಜಾಗೃತಿ ಮೂಡಿಸಿ ಎಂದರು.