ಮೈಸೂರು(Mysuru): ವಾರಾಣಸಿ ಮಾದರಿಯಲ್ಲಿ ಮೈಸೂರು ಮಹಾನಗರಪಾಲಿಕೆಯಿಂದಲೂ ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಘಟಕವನ್ನು ಸ್ಥಾಪಿಸಲಾಗುವುದು ಎಂದು ಮೇಯರ್ ಶಿವಕುಮಾರ್ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಧ್ಯಯನ ಪ್ರವಾಸಕ್ಕೆಂದು ವಾರಾಣಸಿಗೆ ಪಾಲಿಕೆಯ ನಿಯೋಗ ತೆರಳಿತ್ತು. ಅಲ್ಲಿ ಗಮನಸೆಳೆದ ‘ತ್ಯಾಜ್ಯದಿಂದ ಇದ್ದಿಲು’ ಉಪಕ್ರಮವನ್ನು ನಮ್ಮಲ್ಲೂ ಅಳವಡಿಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಪ್ರಸ್ತುತ ನಗರದಲ್ಲಿ ಉತ್ಪತ್ತಿಯಾಗುವ ಹಸಿ ಕಸವನ್ನು ವಿಂಡ್–ರೋ ವಿಧಾನದಲ್ಲಿ ಏರೋಬಿಕ್ ಗೊಬ್ಬರ ಮಾಡಲಾಗುತ್ತಿದೆ. ಇದು ಸಿದ್ಧವಾಗಲು ಅಂದಾಜು 35ರಿಂದ 40 ದಿನಗಳು ಬೇಕಾಗುತ್ತದೆ. ಅಂದರೆ ಒಂದು ಕಾಂಪೊಸ್ಟ್ ಘಟಕ 200 ಟನ್ ಸಾಮರ್ಥ್ಯವಾದರೆ 40 ದಿನದ ತ್ಯಾಜ್ಯವನ್ನು (8ಸಾವಿರ ಟನ್) ಶೇಖರಣೆ ಮಾಡಿಕೊಳ್ಳಲು ಸ್ಥಳಾವಕಾಶ ಬೇಕಾಗುತ್ತದೆ. ಹಸಿ ತ್ಯಾಜ್ಯದಿಂದ ಗೊಬ್ಬರ ತಯಾರಿಸುವಾಗ ಕಸವು ಕೊಳೆಯುವುದರಿಂದ ‘ಲೀಚೆಟ್’ ಎಂಬ ವಿಷಕಾರಿ ದ್ರವವು ಹಾಗೂ ಹಸಿರುಮನೆ ಅನಿಲಗಳೂ ಉತ್ಪತ್ತಿಯಾಗುತ್ತವೆ. ಇದರಿಂದ ಪರಿಸರ ಮಾಲಿನ್ಯ ಉಂಟಾಗುತ್ತದೆ. ಹೀಗಾಗಿ, ತ್ಯಾಜ್ಯವನ್ನು ಅಂದಂದೇ ಸಂಸ್ಕರಿಸಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಯೋಚಿಸಲಾಗುತ್ತಿದೆ ಎಂದರು.
ನಗರದಲ್ಲಿ ನಿತ್ಯ 500ರಿಂದ 600 ಟನ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದೆಲ್ಲವನ್ನೂ ಸಂಸ್ಕರಿಸುವುದು ಸವಾಲಾಗಿದೆ. ಹೀಗಾಗಿ, ತ್ಯಾಜ್ಯದಿಂದ ಇದ್ದಿಲು ತಯಾರಿಕೆ ಘಟಕದಲ್ಲಿ ನಿತ್ಯ 200 ಟನ್ ತ್ಯಾಜ್ಯವನ್ನು ಸಂಸ್ಕರಿಸಲಾಗುವುದು. ಇದನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ಅನುಷ್ಠಾನಗೊಳಿಸಲಾಗುವುದು. ಇದಕ್ಕೆ ಪಾಲಿಕೆಯಿಂದ ಜಾಗ ಕೊಟ್ಟರಷ್ಟೆ ಸಾಕು. ಅನುದಾನ ಬೇಕಾಗುವುದಿಲ್ಲ ಎಂದು ತಿಳಿಸಿದರು.
ಹಸಿಕಸವನ್ನು ಇದ್ದಿಲು ಮಾಡಲು ಎನ್’ಟಿಪಿಸಿ (ನ್ಯಾಷನಲ್ ಥರ್ಮಲ್ ಕಾರ್ಪೊರೇಷನ್), ಕೇಂದ್ರ ಸರ್ಕಾರದ ಇಂಧನ ಸಚಿವಾಲಯದ ಸಂಶೋಧಕರ ವಿಭಾಗವು ಸಫಲವಾಗಿರುವುದು ವಾರಾಣಸಿಗೆ ಭೇಟಿ ನೀಡಿದಾಗ ಕಂಡುಬಂದಿತು. ಘಟಕದಲ್ಲಿ ಮಾಡಿದ ಇದ್ದಿಲನ್ನು ವಿದ್ಯುತ್ ಉತ್ಪಾದನೆಗೆ ಹಾಗೂ ಇತರ ಕಾರ್ಖಾನೆಗಳಲ್ಲಿ ಬಾಯ್ಲರ್‌ಗಳಲ್ಲಿ ಬಳಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಈ ಉಪಕ್ರಮದಿಂದ, ತ್ಯಾಜ್ಯ ವಿಲೇವಾರಿ ಸಮಯ ಕಡಿಮೆಯಾಗುತ್ತದೆ. ನಗರದಲ್ಲಿ ಪರಿಸರ ಮಾಲಿನ್ಯವನ್ನು ತಡೆಯಬಹುದು. ಯೋಜನೆ ಅನುಷ್ಠಾನಕ್ಕೆ ಬೇಕಾಗುವ ತಾಂತ್ರಿಕ ಸಹಾಯವನ್ನು ಎನ್‌ಟಿಪಿಸಿಯ ಅಧಿಕಾರಿಗಳಿಂದ ಪಡೆಯಲಾಗುತ್ತದೆ ಎಂದು ಹೇಳಿದರು.
ನಗರದಲ್ಲಿ ರಸ್ತೆಗಳ ಗುಂಡಿ ಮುಚ್ಚುವುದಕ್ಕಾಗಿ ಮುಂಬೈ ಮಹಾನಗರಪಾಲಿಕೆಯ ಮಾದರಿ ಅಳವಡಿಸಿಕೊಳ್ಳಲಾಗುವುದು. ಕಾಂಕ್ರೀಟ್ ರ್ಯಾಪಿಡ್ ಹಾರ್ಡನಿಂಗ್ ಸಿಮೆಂಟ್ ಉಪಯೋಗಿಸಿ ಗುಂಡಿಗಳನ್ನು ಮುಚ್ಚಲಾಗುವುದು. ಕ್ಯೂರಿಂಗ್ ಮಾಡಿ 8 ಗಂಟೆಗಳ ನಂತರ ವಾಹನಗಳ ಸಂಚಾರಕ್ಕೆ ರಸ್ತೆಯನ್ನು ಬಿಟ್ಟು ಕೊಡಬಹುದಾಗಿದೆ. ರಸ್ತೆಗಳ ನಿರ್ವಹಣೆಗೆ ಇದೊಂದು ಉತ್ತಮ ಕ್ರಮವಾಗಿದೆ ಎನ್ನುವುದನ್ನು ಅಧ್ಯಯನ ಪ್ರವಾಸದಲ್ಲಿ ಕಂಡುಕೊಳ್ಳಲಾಗಿದೆ ಎಂದು ತಿಳಿಸಿದರು.
ಮುಂಬೈ ಪಾಲಿಕೆಯಲ್ಲಿ, ಪಾರಂಪರಿಕ ಕಟ್ಟಡಗಳ ಸಂರಕ್ಷಣೆ, ನಿರ್ವಹಣೆಗೆಂದೇ ಪ್ರತ್ಯೇಕ ವಿಭಾಗವಿದ್ದು, ಅದಕ್ಕೆಂದೇ ಅಧಿಕಾರಿಗಳ ತಂಡವಿದೆ. ನಮ್ಮಲ್ಲೂ ಹೀಗೆಯೇ ಮಾಡುವುದಕ್ಕಾಗಿ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಸರ್ಕಾರದ ಗಮನಕ್ಕೆ ತಂದು ಮುಂದಿನ ಕ್ರಮ ಕೈಗೊಳ್ಳಲಾಗುವುದು. ವಿಶೇಷ ಅನುದಾನವನ್ನೂ ಪಡೆಯಲಾಗುವುದು ಎಂದು ಪ್ರತಿಕ್ರಿಯಿಸಿದರು.