ಮನೆ ರಾಜಕೀಯ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿರಲಿ ವಿರೋಧ ಪಕ್ಷದಲ್ಲೂ ಇರುವುದಿಲ್ಲ: ಕೆ.ಎಸ್.ಈಶ್ವರಪ್ಪ

ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿರಲಿ ವಿರೋಧ ಪಕ್ಷದಲ್ಲೂ ಇರುವುದಿಲ್ಲ: ಕೆ.ಎಸ್.ಈಶ್ವರಪ್ಪ

0

ರಾಯಚೂರು(Raichuru): ಕಾಂಗ್ರೆಸ್ ನಲ್ಲಿ ಖರ್ಗೆ, ಮುನಿಯಪ್ಪ, ಸಿದ್ದರಾಮಯ್ಯ, ಡಿಕೆಶಿ ನಡುವೆಯೇ ಜಗಳಗಳಿವೆ. ಹೀಗಾದರೆ ಅವರು ಅಧಿಕಾರಕ್ಕೆ ಬರುವುದಿರಲಿ ವಿರೋಧ ಪಕ್ಷದಲ್ಲೂ ಇರುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.

ನಗರದಲ್ಲಿಂದು ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಲ್ಲಿ  ಸ್ಪರ್ಧಿಸುವ ಕುರಿತು ಪ್ರತಿಕ್ರಿಯಿಸಿದ  ಅವರು, ನಿಜವಾದ ನಾಯಕ ತಾವು ಪ್ರತಿನಿಧಿಸಿದ ಕ್ಷೇತ್ರ ಅಭಿವೃದ್ಧಿ ಮಾಡಿ ಚುನಾವಣೆಗೆ ಹೋಗಬೇಕು. ಈ ರೀತಿ ಕ್ಷೇತ್ರಗಳನ್ನು ಬದಲಿಸುವುದು ನಾಯಕನ ಲಕ್ಷಣವಲ್ಲ. ಚಾಮುಂಡೇಶ್ವರಿಯಲ್ಲಿ ಸೋತರು. ಈಗ ಬದಾಮಿಯಲ್ಲಿ ಸೋಲುವ ಭೀತಿ ಎದುರಾಗಿದೆ. ಹೀಗಾಗಿ ಕೋಲಾರಕ್ಕೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು.

ಸಿದ್ದರಾಮಯ್ಯ, ಎಚ್.ವಿಶ್ವನಾಥರಿಗೆ ಪಕ್ಷ ನಿಷ್ಠೆ ಇಲ್ಲ. ಅಧಿಕಾರದಲ್ಲಿರುವ ಪಕ್ಷಗಳೇ ಬೇಕು. ನಮಗೆ ನಮ್ಮ ಪಕ್ಷ ತಾಯಿ ಇದ್ದಂತೆ, ತಾಯಿಗೆ ಜೀವನದಲ್ಲಿ ದ್ರೋಹ ಮಾಡಿಲ್ಲ. ಆದರೆ, ಅವರು ಅಧಿಕಾರ ಇರುವಲ್ಲಿ ಹೋಗಬೇಕು ಎನ್ನುತ್ತಾರೆ ಎಂದರು.

ಸ್ಯಾಂಟ್ರೊ ರವಿ ಪ್ರಕರಣದ ತನಿಖೆ ಆಗಲಿ. ಕಳ್ಳ ಸಾಕ್ಷಿ ಸಮೇತ ಸಿಕ್ಕ ಮೇಲೆಯೇ ಯಾರು ತಪ್ಪಿತಸ್ಥರು ಎಂಬುದು ಗೊತ್ತಾಗುತ್ತದೆ. ತನಿಖೆ ಆದಾಗಲೇ ಸತ್ಯಾಂಶ ಬಯಲಿಗೆ ಬರಲಿದೆ ಎಂದರು.

ದೇಶದಲ್ಲಿ ವಿರೋಧ ಪಕ್ಷಗಳೇ ಇಲ್ಲದ ಸ್ಥಿತಿ ಬರುತ್ತಿದೆ. ಕಾಂಗ್ರೆಸ್ ಕನಿಷ್ಠಪಕ್ಷ ವಿಪಕ್ಷದಲ್ಲಿರಲು ಇಂಥ ಯಾತ್ರೆಗಳನ್ನು ಮಾಡಬೇಕಿದೆ. ಕಾಂಗ್ರೆಸ್ ಕೂಡ ಪ್ರಾದೇಶಿಕ ಪಕ್ಷದಂತಾಗಿದೆ. ಜನಾರ್ದನ ರೆಡ್ಡಿ ಪಕ್ಷದಿಂದ ಬಿಜೆಪಿಗೇನು ಧಕ್ಕೆ ಇಲ್ಲ. ಆ ಪಕ್ಷಕ್ಕೆ ಯಾರು ಬೇಕಾದರೂ ಹೋಗಬಹುದು ಎಂದರು.

ಹಿಂದಿನ ಲೇಖನಕಾಂಗ್ರೆಸ್ ರಾಜಕೀಯ ದಿವಾಳಿತನಕ್ಕೆ ತಲುಪಿದೆ: ಸಿಎಂ ಬೊಮ್ಮಾಯಿ
ಮುಂದಿನ ಲೇಖನಜಗತ್ತು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ: ಪ್ರಧಾನಿ ಮೋದಿ