ಮೈಸೂರು : ಕರ್ನಾಟಕ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ವಿಪಕ್ಷಗಳ ಟೀಕೆಗಳಿಗೆ ತೀಕ್ಷ್ಣ ತಿರುಗೇಟು ನೀಡಿದರು. “ವಿಪಕ್ಷದವರು ಕ್ವಾರ್ಟರ್ ಅಲ್ಲ, ಫುಲ್ ಬಾಟಲ್ ಆದ್ರೂ ಮಾತನಾಡಲಿ – ನಾವು ತಲೆ ಕೆಡಿಸಿಕೊಳ್ಳಲ್ಲ” ಎಂದು ಅವರು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.
ಡಿಕೆಶಿ ಅವರು ಗ್ರೇಟರ್ ಬೆಂಗಳೂರು ಬಗ್ಗೆ ಮಾತನಾಡುತ್ತಾ, ಈ ಯೋಜನೆಗೆ ಸಂಬಂಧಿಸಿದಂತೆ ಸರ್ವಪಕ್ಷ ಸಭೆಯನ್ನು ಶೀಘ್ರದಲ್ಲಿ ಕರೆದು ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಇದೀಗ ಬೆಂಗಳೂರು ನಗರ ವ್ಯಾಪ್ತಿಗೆ ಹೊಸ ಬಡಾವಣೆಗಳನ್ನು ಸೇರಿಸುವುದಿಲ್ಲ. ಇರುವ ವ್ಯಾಪ್ತಿಯಲ್ಲಿಯೇ ಗ್ರೇಟರ್ ಬೆಂಗಳೂರು ಅನುಷ್ಠಾನಗೊಳಿಸಲಾಗುವುದು. ಅದೇ ವ್ಯಾಪ್ತಿಯ ಆಧಾರದಲ್ಲಿ ಮುಂದಿನ ಚುನಾವಣೆಯನ್ನ ಕೂಡ ನಡೆಸಲಾಗುತ್ತದೆ.
ಮುಂದುವರಿದು ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಕುರಿತು ಮಾತನಾಡಿ, ಚುನಾವಣೆಯನ್ನು ವಿಳಂಬ ಮಾಡುವದರಲ್ಲಿ ಯಾವುದೇ ಅರ್ಥವಿಲ್ಲ. ಮೂರು ನಾಲ್ಕು ದಿನಗಳಲ್ಲಿ ಚುನಾವಣಾ ದಿನಾಂಕ ನಿಗದಿ ಮಾಡಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ರಾಮನಗರದ ಹೆಸರು ಬದಲಾವಣೆಯ ಕುರಿತ ಪ್ರಸ್ತಾಪವನ್ನೂ ಅವರು ಹೇಳಿದರು. “ರಾಮನಗರ ಹೆಸರು ಬದಲಾವಣೆಗೆ ಶೀಘ್ರದಲ್ಲೇ ಶುಭ ಮುಹೂರ್ತ ಬರುತ್ತಿದೆ” ಎಂಬ ಮಾತುಗಳು, ರಾಜಕೀಯ ಚಟುವಟಿಕೆಗೆ ಮತ್ತೊಂದು ತಿರುವು ನೀಡಿವೆ.
ವಿಪಕ್ಷಗಳು ಸರ್ಕಾರದ ಕೆಲವು ಯೋಜನೆಗಳನ್ನು ಟೀಕಿಸುತ್ತಿರುವ ಹಿನ್ನೆಲೆಯಲ್ಲಿ, ಡಿಕೆಶಿಯವರು ತಮ್ಮ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ. “ಅವರು ಎಷ್ಟೇ ವಾಗ್ದಾಳಿ ಮಾಡಿದರೂ ಸರ್ಕಾರ ತನ್ನ ಕೆಲಸ ಮಾಡುತ್ತಲೇ ಇರುತ್ತದೆ” ಎಂದು ತಿಳಿಸಿದರು.














