ಮನೆ ರಾಷ್ಟ್ರೀಯ ಬ್ರಿಟಿಷರು ಇದ್ದಾಗಲೂ ಗಣೇಶ ಮೆರವಣಿಗೆಗೆ ಸ್ವಾತಂತ್ರ‍್ಯ ಇತ್ತು; ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಇಲ್ಲ – ಕೆ....

ಬ್ರಿಟಿಷರು ಇದ್ದಾಗಲೂ ಗಣೇಶ ಮೆರವಣಿಗೆಗೆ ಸ್ವಾತಂತ್ರ‍್ಯ ಇತ್ತು; ಆದರೆ, ಕಾಂಗ್ರೆಸ್ ಸರ್ಕಾರದಲ್ಲಿ ಇಲ್ಲ – ಕೆ. ಸುಧಾಕರ್

0

ನವದೆಹಲಿ : ಬ್ರಿಟಿಷರು‌ ಇದ್ದಾಗಲೂ ಗಣೇಶ ಮೆರವಣಿಗೆಗೆ ಸ್ವಾತಂತ್ರ‍್ಯ ಇತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಈ ಸ್ವಾತಂತ್ರ‍್ಯ ಇಲ್ಲ ಎಂದು ಸಂಸದ ಡಾ.ಕೆ ಸುಧಾಕರ್ ಕಿಡಿಕಾರಿದ್ದಾರೆ. ಮದ್ದೂರಿನಲ್ಲಿ ಗಣೇಶ ಮೆರವಣಿಗೆಯಲ್ಲಿ ಕಲ್ಲು ತೂರಾಟ ವಿಚಾರವಾಗಿ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕೆ. ಸುಧಾಕರ್, ಬ್ರಿಟಿಷ್ ಕಾಲದಲ್ಲಿ ಗಣೇಶ ಮೆರವಣಿಗೆಗೆ ಸ್ವಾತಂತ್ರ‍್ಯ ಇತ್ತು. ಇಂದು ಕಾಂಗ್ರೆಸ್ ಸರ್ಕಾರದಲ್ಲಿ ಗಣೇಶ ವಿರ್ಸಜನೆಗೆ ಅನುಮತಿ ಕಷ್ಟವಾಗಿದೆ.

ಒಂದು ಕೋಮಿಗೆ ಮಾತ್ರ ಎಲ್ಲದಕ್ಕೂ ಪರವಾನಿಗೆ ನೀಡಿದೆ. ಬಹುಸಂಖ್ಯಾತ ಹಿಂದೂಗಳನ್ನು ಟಾರ್ಗೆಟ್ ಮಾಡಿದೆ. ಹಿಂದೂಗಳ ಹಬ್ಬ ಮಾಡಿದರೆ ನೂರು ಪ್ರಶ್ನೆ ಕೇಳುತ್ತಾರೆ, ಅನುಮತಿ ಕೊಡಲ್ಲ. ಶಾಂತಿಯುತ ಮೆರವಣಿಗೆ ಮಾಡಿದರೂ ಗಲಭೆ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಸ್ವಾತಂತ್ರ‍್ಯ ಹೋರಾಟದಲ್ಲಿ ಹಿಂದೂಗಳ ನಡುವೆ ಸಮನ್ವಯ ಬರಲು ಗಣೇಶ ಹಬ್ಬ ಕಾರಣ. ಹಿಂದೂಗಳ ಒಗ್ಗಟ್ಟಿನ ಪ್ರತೀಕ ಈ ಹಬ್ಬವಾಗಿತ್ತು. ಕಾಂಗ್ರೆಸ್ ಸರ್ಕಾರದಲ್ಲಿ ಈ ಸ್ವಾತಂತ್ರ‍್ಯ ಇಲ್ಲ. ಹಿಂದೂಗಳ ಧಾರ್ಮಿಕ ಭಾವನೆಗೆ ಗೌರವ ಕೊಡುತ್ತಿಲ್ಲ.

ನನ್ನ ಕ್ಷೇತ್ರದಲ್ಲೂ ಒಂದು ಸ್ಪೀಕರ್ ಹಾಕಿಕೊಳ್ಳಲು ಎಸ್‌ಪಿ ಅನುಮತಿ ಬೇಕು. ಕಾಂಗ್ರೆಸ್‌ಗೆ ಹಿಂದೂಗಳು ಮತ ಹಾಕಿಲ್ವ? ಇಂತಹ ಪರಿಸ್ಥಿತಿ ಯಾವ ಕಾಲದಲ್ಲೂ ನೋಡಿಲ್ಲ. ವರ್ಷಕ್ಕೊಂದು ಆಗುವ ಹಬ್ಬಕ್ಕೆ ಅನುಮತಿ ಬೇಕಾ? ಸ್ಪೀಕರ್ ಹಾಕಬೇಡಿ ಎಂದು ಬಿಜೆಪಿ ನಾಯಕರು ಹೇಳಿದ್ರಾ? ಕೋಮು ಗಲಭೆ ಹುಟ್ಟುಹಾಕಿದ್ದು ಕಾಂಗ್ರೆಸ್ ಸರ್ಕಾರ. ಮುಸ್ಲಿಮರನ್ನ 100% ಓಲೈಕೆ ಮಾಡಿದ್ದೀರಿ, ಇನ್ನೇಷ್ಟು ಮಾಡುತ್ತೀರಿ ಎಂದು ಪ್ರಶ್ನಿಸಿದರು.

ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ ಭಾರತ ಜಿಂದಾಬಾದ್ ಅಂತಾರೆ. ವಿಧಾನಸೌಧದಲ್ಲೇ ಪಾಕಿಸ್ತಾನ ಜಿಂದಾಬಾದ್ ಅಂದಿದ್ದರು. ಕಾಂಗ್ರೆಸ್ ಇರುವವರೆಗೂ ಭಾರತಕ್ಕೆ ಅಪಾಯ ಇದೆ. ಇಂತಹ ಹೇಳಿಕೆಗಳನ್ನು ದೇಶದ್ರೋಹಿಗಳು ಎಂದು ಕರೆಯಬೇಕು. ಬಹುಸಂಖ್ಯಾತ ಹಿಂದೂಗಳ ಮೇಲೆ ಗದಾಪ್ರಹಾರ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಪರೋಕ್ಷವಾಗಿ ಸಹಕಾರ ನೀಡುತ್ತಿದೆ.

ಸರ್ಕಾರದ ಬೆಂಬಲದಿಂದ ಕಾನೂನಿನ ಭಯ ಇಲ್ಲದೇ ವರ್ತಿಸುತ್ತಿದ್ದಾರೆ. ಇಂತಹವರನ್ನು ಕಾಂಗ್ರೆಸ್ ನಾಯಕರು ಬ್ರದರ್ಸ್ ಅಂತಾರೆ. ಸಂವಿಧಾನ ಬರೀ ಬಾಯಿಮಾತಲ್ಲಿ ಇದೆ, ಕಾರ್ಯದಲ್ಲಿಲ್ಲ. ಬಹುಸಂಖ್ಯಾತ ಹಿಂದೂಗಳ ಭಾವನೆ, ಆಚಾರ ವಿಚಾರಗಳಿಗೆ ಧಕ್ಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಕೊನೆಯ ದಿನಗಳನ್ನು ಎಣಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಉಪರಾಷ್ಟ್ರಪತಿ ಚುನಾವಣೆ ವಿಚಾರವಾಗಿ ಮಾತನಾಡಿದ ಕೆ. ಸುಧಾಕರ್, ಎನ್‌ಡಿಎ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ನೂರಕ್ಕೆ ನೂರು ವಿಶ್ವಾಸ ಇದೆ. ಸಿಪಿ ರಾಧಾಕೃಷ್ಣನ್ ಅವರಿಗೆ ಅಪಾರ ಅನುಭವ ಇದೆ, ಪಕ್ಷದ ಆದರ್ಶ ಮೈಗೂಡಿಸಿಕೊಂಡಿದ್ದಾರೆ. ಎಲ್ಲ ಸಂಸದರೂ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ದೊಡ್ಡ ಅಂತರದಲ್ಲಿ ಸಿಪಿ ರಾಧಾಕೃಷ್ಣನ್ ಗೆಲವು ಸಾಧಿಸಲಿದ್ದಾರೆ. ಈ ದೇಶಕ್ಕೆ ಸಜ್ಜನ ಸರಳ ವ್ಯಕ್ತಿತ್ವದ, ಅಪಾರ ಅನುಭವ ಹೊಂದಿರುವ ವ್ಯಕ್ತಿ ಉಪರಾಷ್ಟ್ರಪತಿಯಾಗಲಿದ್ದಾರೆ ಎಂದು ಹೇಳಿದರು.