ಮನೆ ಅಂತಾರಾಷ್ಟ್ರೀಯ ವಿಶ್ವದಲ್ಲಿ 11 ನಿಮಿಷಕ್ಕೊಬ್ಬ ಹುಡುಗಿ ಅಥವಾ ಮಹಿಳೆಯ ಹತ್ಯೆ: ಆಂಟೋನಿಯೊ ಗುಟೆರೆಸ್

ವಿಶ್ವದಲ್ಲಿ 11 ನಿಮಿಷಕ್ಕೊಬ್ಬ ಹುಡುಗಿ ಅಥವಾ ಮಹಿಳೆಯ ಹತ್ಯೆ: ಆಂಟೋನಿಯೊ ಗುಟೆರೆಸ್

0

ವಿಶ್ವಸಂಸ್ಥೆ: ವಿಶ್ವದಾದ್ಯಂತ ಪ್ರತಿ 11 ನಿಮಿಷಕ್ಕೆ ಒಬ್ಬ ಮಹಿಳೆ ಅಥವಾ ಹುಡುಗಿಯನ್ನು ಆತ್ಮೀಯ ಸಂಗಾತಿ ಅಥವಾ ಕುಟುಂಬದ ಸದಸ್ಯರು ಹತ್ಯೆ ಮಾಡುತ್ತಾರೆ ಎಂಬ ಆತಂಕಕಾರಿ ಅಂಕಿಅಂಶವನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ನೀಡಿದ್ದಾರೆ.

ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಾಗತಿಕವಾಗಿ ಮಾನವ ಹಕ್ಕುಗಳ ಉಲ್ಲಂಘನೆ ವ್ಯಾಪಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ಈ ಪರಿಸ್ಥಿತಿಯನ್ನು ನಿಭಾಯಿಸಲು ಎಲ್ಲ ದೇಶಗಳು ರಾಷ್ಟ್ರೀಯ ಕ್ರಿಯಾ ಯೋಜನೆ ರೂಪಿಸುವಂತೆ ಅವರು ಕರೆ ನೀಡಿದ್ದಾರೆ.

ನವೆಂಬರ್ 25ರಂದು ವಿಶ್ವ ಮಹಿಳೆಯರ ಮೇಲಿನ ದೌರ್ಜನ್ಯ ತಡೆ ದಿನದ ಹಿನ್ನೆಲೆಯಲ್ಲಿ ಗುಟೆರಸ್ ಈ ಹೇಳಿಕೆ ನೀಡಿದ್ದಾರೆ.

ಮಹಿಳೆಯರು ಮತ್ತು ಹುಡುಗಿಯರ ಮೇಲಿನ ದೌರ್ಜನ್ಯವು ವಿಶ್ವದಲ್ಲಿ ಅತ್ಯಂತ ವ್ಯಾಪಕವಾಗಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಕೋವಿಡ್ -19 ಸಾಂಕ್ರಾಮಿಕದಿಂದ ಆರ್ಥಿಕ ಪ್ರಕ್ಷುಬ್ಧತೆ ಮತ್ತು ಇತರ ಒತ್ತಡಗಳು ಇನ್ನಷ್ಟು ದೈಹಿಕ ಮತ್ತು ಮೌಖಿಕ ಕಿರುಕುಳಕ್ಕೆ ಕಾರಣವಾಗುತ್ತವೆ ಎಂದು ನಮಗೆ ತಿಳಿದಿದೆ ಎಂದು ಹೇಳಿದ್ದಾರೆ.

ಇಡೀ ದೇಶವನ್ನು ಬೆಚ್ಚಿಬೀಳಿಸಿದ ದೆಹಲಿಯ ಶ್ರದ್ಧಾ ವಾಲ್ಕರ್ ಹತ್ಯೆ ಬೆನ್ನಲ್ಲೇ ಆಂಟೊನಿಯೊ ಗುಟೆರಸ್ ಹೇಳಿಕೆ ಬಂದಿದೆ.

ಸ್ತ್ರೀದ್ವೇಷಿ ಭಾಷಣದಿಂದ ಕಿರುಕುಳ, ಅಸಭ್ಯ ಚಿತ್ರಗಳನ್ನು ಬಳಸಿ ನಿಂದನೆ ಸೇರಿದಂತೆ ಮಹಿಳೆಯರು ಮತ್ತು ಹುಡುಗಿಯರು ಅತಿರೇಕದ ಆನ್‌ಲೈನ್ ಹಿಂಸಾಚಾರವನ್ನು ಎದುರಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಈ ತಾರತಮ್ಯ, ಹಿಂಸಾಚಾರ ಮತ್ತು ನಿಂದನೆಯು ಎಲ್ಲಾ ಹಂತಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಭಾಗವಹಿಸುವಿಕೆಯನ್ನು ಮಿತಿಗೊಳಿಸುತ್ತವೆ. ಅವರ ಮೂಲಭೂತ ಹಕ್ಕುಗಳು ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತವೆ. ಜಗತ್ತಿಗೆ ಅಗತ್ಯವಿರುವ ಸಮಾನ ಆರ್ಥಿಕ ಚೇತರಿಕೆ ಮತ್ತು ಸುಸ್ಥಿರ ಬೆಳವಣಿಗೆಯನ್ನು ನಿರ್ಬಂಧಿಸುತ್ತವೆ ಎಂದು ಗುಟೆರಸ್ ಕಳವಳ ವ್ಯಕ್ತಪಡಿಸಿದ್ದಾರೆ.