ಮನೆ ರಾಜ್ಯ ಪ್ರತಿ ಶಾಸಕರೂ ಜನರ ಧ್ವನಿಯಾದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು: ಸಿದ್ದರಾಮಯ್ಯ

ಪ್ರತಿ ಶಾಸಕರೂ ಜನರ ಧ್ವನಿಯಾದಾಗ ಮಾತ್ರ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು: ಸಿದ್ದರಾಮಯ್ಯ

0

ಎಸ್.ಆರ್.ಪಾಟೀಲ್ ಹಾಗೂ ಕೆ.ಟಿ. ಶ್ರೀಕಂಠೇಗೌಡಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ಪ್ರದಾನ

ಬೆಂಗಳೂರು: 2021- 22 ನೇ ಸಾಲಿಗೆ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ವಿರೋಧ ಪಕ್ಷದ ನಾಯಕ ಎಸ್ ಆರ್.ಪಾಟೀಲರಿಗೆ ಹಾಗೂ 2022 – 23 ನೇ ಸಾಲಿಗೆ ಅತ್ಯುತ್ತಮ ಶಾಸಕರಾಗಿ ಆಯ್ಕೆಯಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದಿಸಿ ಮಾತನಾಡಿದರು.

Join Our Whatsapp Group


ಶಾಸಕರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು
ಭಾರತ ಸಂವಿಧಾನ ಕೇವಲ ವಕೀಲರ ದಾಖಲೆಯಲ್ಲ. ಅದು ಜೀವನ್ಮುಖಿಯದುದ್ದು. ಅದರ ಚೈತನ್ಯ ನಿರಂತರವಾದುದು. ನಮ್ಮ ಸಮಾಜ ಹೇಗಿರಬೇಕೆಂದು, ಹೇಗೆ ಆಳಿಸಿಕೊಳ್ಳಬೇಕೆಂದು ಅಂಬೇಡ್ಕರ್ ಅವರು ಸಂವಿಧಾನ ರಚಿಸಿದರು. ಸರ್ಕಾರ, ಮೇಲ್ಮನೆ, ಕೆಳಮನೆ ಶಾಸಕರು ಸಂವಿಧಾನದ ಚೌಕಟ್ಟಿನಲ್ಲಿ ಕೆಲಸ ಮಾಡಬೇಕು. ಸಾಮಾಜಿಕ ಬದ್ಧತೆ ನಮ್ಮ ಮುಖ್ಯ ಗುರಿಯಾಗಿರಬೇಕು. ಆಗ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ ಎಂದರು.


ಜನಪರ ಕಾಳಜಿ ಅಗತ್ಯ
ಸಂಸತ್ತು, ವಿಧಾನಸಭೆಯನ್ನು ದೇವರು ಎಂದು ಕರೆಯುತ್ತೇವೆ. ಎಲ್ಲರಿಗೂ ಒಳಿತು ಮಾಡು ಎಂದು ಕೇಳಿಕೊಂಡರೆ ಒಳಿತಾಗುತ್ತದೆ. ನಾವು ಇಲ್ಲಿಗೆ ಬರುವುದು ದೇಗುಲಕ್ಕೆ ಬಂದಂತೆ. ನಾವು ಜನಸೇವಕರು. ಇಬ್ಬರೂ ಜನಪರ ಕಾಳಜಿ ಇಟ್ಟು ಕೊಂಡು ಜನರ ಧ್ವನಿಯಾಗಿ ಕೆಲಸ ಮಾಡಿದ್ದಾರೆ. ಪ್ರತಿಯೊಬ್ಬರೂ ಜನರ ಧ್ವನಿಯಾದಾಗ ಮಾತ್ರ ಸರ್ಕಾರ ಪರಿಣಾಮಕಾರಿಯಾಗಿ ಕೆಲಸ ಮಾಡಬಹುದು. ಶಾಸಕರಾದವರಿಗೆ ಅಧ್ಯಯನ ಬಹಳ ಮುಖ್ಯ ಎಂದರು.
ಜನರ ಧ್ವನಿಯಾಗಿದ್ದಾರೆ
ಸಮಾಜಕ್ಕೆ ಸಂಬಂಧಿಸಿದಂತೆ ಮಾತನಾಡಬೇಕು. ಜನರ ಸಮಸ್ಯೆಗಳು, ಜನರ ಧ್ವನಿಯಾಗಿ ಮಾತನಾಡುವುದು ಮುಖ್ಯ. ಸದನದ ಇತರರಿಗೆ ಅವರ ಭಾಷಣ, ವಿಚಾರಗಳು ಮಾದರಿಯಾಗಿವೆ ಎಂದರು.
ಮೇಲ್ಪಂಕ್ತಿಯನ್ನು ಹಾಕಿದ್ದಾರೆ
ಎಲ್ಲಾ ಶಾಸಕರು ಉತ್ತಮರೇ ಎಂದು ಭಾವಿಸಿದ್ದೇನೆ. ಇವರಿಬ್ಬರೂ ಅತ್ಯುತ್ತಮ ಶಾಸಕರು. ಜನರ ಧ್ವನಿಯಾಗಲು ಮೇಲ್ಪಂಕ್ತಿಯನ್ನು ಬಿಟ್ಟುಹೋಗಿದ್ದಾರೆ. ಎಸ್.ಆರ್.ಪಾಟೀಲರು ಆಡು ಮುಟ್ಟದ ಸೊಪ್ಪಿಲ್ಲದಂತೆ ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಸದನದಲ್ಲಿ ಬಹಳ ಮಾತನಾಡಿದ್ದಾರೆ. ಕೃಷ್ಣಾ ಮೂರನೇ ಹಂತ ಆಗಬೇಕೆಂದು ಬಲವಾಗಿ ವಾದ ಮಾಡಿದ್ದಾರೆ. ಸಮಾಜದ ಎಲ್ಲಾ ವರ್ಗದ ಜನ, ಅವಕಾಶ ವಂಚಿತರ ಬಗ್ಗೆ ಧ್ವನಿಯಾಗಿ ಕೆಲಸ ಮಾಡುವಲ್ಲಿ ಇತರರಿಗಿಂತ ಮುಂದೆ ಹೋಗಿದ್ದಾರೆ. ಇನ್ನಷ್ಟು ಹೆಚ್ಚು ಜವಾಬ್ದಾರಿಯಿಂದ ಕೆಲಸ ಮಾಡುವಂತಾಗಲಿ ಎಂದು ಮುಖ್ಯ ಮಂತ್ರಿಗಳು ಹಾರೈಸಿದರು.
ಸಮಾರಂಭದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಉಪಸಭಾಪತಿ ಎಂ.ಕೆ.ಪ್ರಾಣೇಶ್, ಸಚಿವರಾದ ಹೆಚ್.ಕೆ ಪಾಟೀಲ್ ಹಾಗೂ ಎನ್.ಎಸ್. ಬೋಸ ರಾಜು, ಪರಿಷತ್ ಸದಸ್ಯರಾದ ಭೋಜೇಗೌಡ, ಟಿ. ಎ. ಶರವಣ, ಮುಖ್ಯ ಸಚೇತಕ ಸಲೀಂ ಅಹ್ಮದ್, ವೈ.ಎ. ನಾರಾಯಣಸ್ವಾಮಿ, ಶಾಸಕ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಹಿಂದಿನ ಲೇಖನಅಮೂಲ್ಯ ಸಸ್ಯ, ಪ್ರಾಣಿ ಸಂಕುಲ ರಕ್ಷಣೆಗೆ ಸರ್ಕಾರ ಬದ್ಧ : ಈಶ್ವರ ಖಂಡ್ರೆ
ಮುಂದಿನ ಲೇಖನಹನೂರು‌: ಚಿರತೆ ದಾಳಿಗೆ ಜಾನುವಾರುಗಳ ಬಲಿ