ನವದೆಹಲಿ: ಭ್ರಷ್ಟಾಚಾರ ಕುರಿತಂತೆ ವಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ‘ಜನರಿಂದ ಲೂಟಿ ಮಾಡಿರುವ ಪ್ರತಿ ಪೈಸೆಯನ್ನು ಅವರು ಹಿಂದಿರುಗಿಸಬೇಕು. ಇದು, ಮೋದಿ ಗ್ಯಾರಂಟಿ’ ಎಂದಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಈ ಬಗ್ಗೆ ಅವರು ಪೋಸ್ಟ್ ಮಾಡಿದ್ದಾರೆ.
ಜಾರ್ಖಂಡ್ ನ ಕಾಂಗ್ರೆಸ್ ಸಂಸದ ಧೀರಜ್ ಪ್ರಸಾದ್ ಸಾಹು ಅವರಿಗೆ ಸೇರಿದ್ದು ಎನ್ನಲಾದ ಉದ್ಯಮ ಸಮೂಹದಿಂದ ಐ.ಟಿ ಅಧಿಕಾರಿಗಳು ₹200 ಕೋಟಿಗೂ ಹೆಚ್ಚು ಹಣ ಜಪ್ತಿ ಮಾಡಿರುವ ಸಂಬಂಧ ಮಾಧ್ಯಮ ವರದಿಯನ್ನು ಅವರು ಹಂಚಿಕೊಂಡಿದ್ದಾರೆ.
ಎತ್ತರಕ್ಕೆ ಜೋಡಿಸಿಟ್ಟಿರುವ ಕರೆನ್ಸಿ ನೋಟುಗಳನ್ನು ದೇಶದ ಜನರು ಒಮ್ಮೆ ನೋಡಬೇಕು. ನಂತರ ಪ್ರಾಮಾಣಿಕತೆ ಕುರಿತು ಆವರ ಪಕ್ಷದವರು ಮಾತನಾಡುವುದನ್ನು ಕೇಳಬೇಕು’ ಎಂದು ಮೋದಿ ಹೇಳಿದರು.
ಮಾಧ್ಯಮ ವರದಿ ಜೊತೆಗೆ, ಆಲ್ಮೇರಾಗಳಲ್ಲಿ ನೋಟುಗಳನ್ನು ಜೋಡಿಸಿಟ್ಟಿರುವ ಚಿತ್ರವು ಪ್ರಕಟವಾಗಿದೆ.