ಮಂಡ್ಯ(Mandya): ಬೇರೆ ಸಮುದಾಯಗಳಿಗೆ ಮೀಸಲಾತಿ ನೀಡುವುದು ಸ್ವಾಗತಾರ್ಹ, ಆದರೆ ಒಕ್ಕಲಿಗರಿಗೂ ಮೀಸಲಾತಿಯಲ್ಲಿ ಪಾಲು ಸಿಗಬೇಕು ಎಂದು ಸ್ಫಟಿಕಪುರ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಒಕ್ಕಲಿಗರ ಮೀಸಲಾತಿಗೆ ಒತ್ತಾಯಿಸಿ ಪಟ್ಟಣದಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮೀಸಲಾತಿ ವಿಚಾರದಲ್ಲಿ ಒಕ್ಕಲಿಗರು ಈಗ ಶಾಂತ ಸಾಗರದಂತಿದ್ದಾರೆ, ಸಾಗರದ ಅಲೆಗಳು ಯಾವಾಗ ಬೇಕಾದರೂ ಅಲೆ ಏಳಬಹುದು. ಅಲೆ ಎದ್ದರೆ ಅದನ್ನು ತಡೆಯಲು ಕಷ್ಟವಾಗಬಹುದು. ಒಕ್ಕಲಿಗರಿಗೆ ರಾಮ–ಕೃಷ್ಣರಂತೆ ಬದುಕುವುದೂ ಗೊತ್ತು, ಉಗ್ರ ನರಸಿಂಹನ ಅವತಾರ ತಾಳುವುದೂ ಗೊತ್ತು ಎಂದರು.
ಸರ್ಕಾರ ನಮ್ಮನ್ನು ಯಾವ ರೀತಿ ನಡೆಸಿಕೊಳ್ಳುತ್ತದೋ ಆ ರೀತಿ ನಡೆಯುತ್ತೇವೆ. ಆದರೆ, ನಮ್ಮ ತಾಳ್ಮೆ ಪರೀಕ್ಷಿಸಬೇಡಿ. ಮುಂದಿನ ದಿನಗಳಲ್ಲಿ ಈ ಹೋರಾಟ ಉಗ್ರ ರೂಪ ಪಡೆಯಬಹುದು. ಒಂದು ಸಣ್ಣ ಕಿಡಿ ಅನ್ನ ಬೇಯಿಸುತ್ತದೆ, ಅದೇ ಕಿಡಿ ಹೊತ್ತಿ ಉರಿಯಲೂಬಹುದು ಎಂದರು.
ಚುನಾವಣೆಗೂ ಮೀಸಲಾತಿ ಹೋರಾಟಕ್ಕೂ ಯಾವುದೇ ಸಂಬಂಧವಿಲ್ಲ. ರಾಜ್ಯದಲ್ಲಿ ಶೇ 16ರಷ್ಟು ಜನಸಂಖ್ಯೆ ಇದ್ದರೂ ಮೀಸಲಾತಿ ವಿಚಾರದಲ್ಲಿ ತಾರತಮ್ಯ ಮಾಡಲಾಗಿದೆ. ಪ್ರವರ್ಗ 3ಎ ಅಡಿ ಬೇರೆ ಸಮುದಾಯಗಳನ್ನು ಸೇರಿಸಿರುವ ಕಾರಣ ಒಕ್ಕಲಿಗರು ಇದನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. 3ಎ ಮೀಸಲಾತಿಯನ್ನು ಶೇ 4ರಿಂದ ಶೇ 12ಕ್ಕೆ ಹೆಚ್ಚಳ ಮಾಡಬೇಕು ಎಂದು ಒತ್ತಾಯಿಸಿದರು.