ಮೈಸೂರು: ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಳಾದ ಕೆ ಗಾಯತ್ರಿ ಅವರು ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೈಸೂರು, ಜಿಲ್ಲಾ ಕ್ಷಯರೋಗ ನಿಯಂತ್ರಣ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯದ ಬಗ್ಗೆ ಇರಲಿ ಗಮನ ಟಿ ಬಿ ಮುಕ್ತ ಭಾರತ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು 100 ದಿನಗಳ ಕಾಲ ಕ್ಷಯ ರೋಗ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. ನಿಕ್ಷಯ ಪೋರ್ಟಲ್ ನಲ್ಲಿ ಕ್ಷಯ ರೋಗಿಗಳನ್ನು ಅಡಾಪ್ಟ್ ಮಾಡಿಕೊಳ್ಳಲು ಅವಕಾಶ ಇದೆ. ಈ ರೋಗಿಗಳ ಔಷಧಿಗಳನ್ನು ನೀಡಲು ಕಡಿಮೆ ಮೊತ್ತದ ಹಣವನ್ನು ಒದಗಿಸಬಹುದು ಯಾರು ಬೇಕಾದರೂ ಅಡಾಪ್ಟ್ ಮಾಡಿಕೊಳ್ಳಬಹುದು ಎಂದರು.
ಮೊದಲು ನಾವು ಕ್ಷಯ ರೋಗಿಗಳನ್ನು ಪತ್ತೆ ಹಚ್ಚಬೇಕು. ಇದು ಒಬ್ಬರಿಂದ ಒಬ್ಬರಿಗೆ ಹರಡುವ ಕಾಯಿಲೆ ಆಗಿರುವುದರಿಂದ ಇದಕ್ಕೆ ಚಿಕಿತ್ಸೆ ನೀಡಿ ಹರಡದಂತೆ ನೋಡಿಕೊಳ್ಳ್ಳಬೇಕು. ಮೂರು ನಾಲ್ಕು ವಾರ ಗಳಿಗೂ ಹೆಚ್ಚು ಕೆಮ್ಮು ಇದ್ದರೆ ಅದು ಕ್ಷಯ ಆಗಿರಬಹುದು ಆದ್ದರಿಂದ ಪರೀಕ್ಷೆ ಮಾಡಿಸಿಕೊಳ್ಳ್ಳಬೇಕು. ಸರ್ಕಾರದಿಂದ ಉಚಿತ ಚಿಕಿತ್ಸೆ ನೀಡಲಾಗುವುದು. ಪತ್ತೆ ಹಚ್ಚಿದವರಿಗೆ 500 ರೂಗಳ ಪ್ರೋತ್ಸಾಹ ಧನ ನೀಡಲಾಗುವುದು. ಗ್ರಾಮಿಣ ಪದೇಶದಲ್ಲಿ ಹೆಚ್ಚಿನ ಪರೀಕ್ಷೆ ಆಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು ಆಶಾ ಕಾರ್ಯಕರ್ತೆಯರು ಹೆಚ್ಚಿನ ರೀತಿ ಕಾರ್ಯ ನಿರ್ವಹಿಸಬೇಕು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಇದರಲ್ಲಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಸಿ ಎನ್ ಮಂಜೇಗೌಡ ಅವರು ಮಾತನಾಡಿ ರೈತರು, ವೈದ್ಯರು, ಸೈನಿಕರು, ಪೊಲೀಸರು ಹಾಗೂ ಶಿಕ್ಷಕರು ಇವರು ದೇಶಕ್ಕೆ ಪಂಚ ರತ್ನಗಳು ಇದ್ದ ಹಾಗೇ. ಕ್ಷಯ ರೋಗ ಅಂಟು ರೋಗ. ಇಂತಹ ರೋಗಕ್ಕೆ ಚಿಕಿತ್ಸೆ ನೀಡುವ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬದಿಗಳಿಗೆ ಧನ್ಯವಾದಗಳು. ಡಾಕ್ಟರ್ ಹಾಗೂ ಸೈನಿಕರು ತಮ್ಮ ಪ್ರಾಣವನ್ನು ಪಣಕ್ಕೆ ಇಟ್ಟು ತಮ್ಮ ವೃತ್ತಿಯನ್ನು ಮಾಡುತ್ತಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಪಿ ಸಿ ಕುಮಾರಸ್ವಾಮಿ ಅವರು ಮಾತನಾಡಿ ಇಂದಿನಿಂದ 100 ದಿನಗಳ ಕಾಲ ಟಿ ಬಿ ಮುಕ್ತ ಅಭಿಯಾನ ಹಮ್ಮಿಕೊಳ್ಳಲಾಗಿದೆ. 2005-06 ರಿಂದ ಆರ್ ಎಂ ಪಿ ಟಿ ಸಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಟಿ ಬಿ ಯನ್ನು ಕಡಿಮೆ ಮಾಡುವುದು ಆಗಿದೆ. 1 ಲಕ್ಷ ಜನರಿಗೆ 50 ಕ್ಕಿಂತ ಕಡಿಮೆ ಜನರಿಗೆ ಟಿ ಬಿ ಇರುವಂತೆ ಮಾಡುವುದು ನಮ್ಮ ಗುರಿ ಆಗಿದೆ. ಮುಂದಿನ 100 ದಿನಗಳ ಕಾಲ ವಿವಿಧ ಇಲಾಖೆಗಳ ಸಮನ್ವಯ ದೊಂದಿಗೆ ಟಿ ಬಿ ಯನ್ನು ಕಡಿಮೆ ಮಾಡಲು ಗ್ರಾಮಗಳಿಗೆ ಭೇಟಿ ನೀಡಿ ಸರ್ವೇ ಮಾಡಲಾಗುವುದು. ಯಾವ ಗ್ರಾಮಗಳಲ್ಲಿ ಯಾವ ಏರಿಯಾಗಳಲ್ಲಿ ಕ್ಷಯ ರೋಗ ಇದೆ ಎಂಬುದನ್ನು ಪತ್ತೆ ಹಚ್ಚಿ ಚಿಕಿತ್ಸೆ ನೀಡಲಾಗುವುದು ಎಂದು ತಿಳಿಸಿದರು.
ಸಕ್ಕರೆ ಕಾಯಿಲೆ, ಏಡ್ಸ್ ಗೆ ಚಿಕಿತ್ಸೆ ಪಡೆಯುತ್ತಿರುವವರು, ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವವರಿಗೆ ಹೆಚ್ಚಾಗಿ ಕ್ಷಯ ರೋಗ ಅಟ್ಯಾಕ್ ಆಗುವ ಸಾಧ್ಯತೆ ಹೆಚ್ಚು. ಇಂತವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು. ಜಿಲ್ಲೆಯಲ್ಲಿ 204 ಹಾಡಿಗಳನ್ನು ಗುರುತಿಸಿದ್ದು ಇಲ್ಲಿ ಹೆಚ್ಚಿನ ಗಮನ ಹರಿಸಿ ಪರೀಕ್ಷೆ ಮಾಡಲಾಗುವುದು. ಜಿಲ್ಲೆಯಲ್ಲಿ 4200 ಪ್ರಕರಣಗಳನ್ನು ಪತ್ತೆ ಹಚ್ಚಬೇಕು ಎಂದು ಜಿಲ್ಲೆಗೆ ಗುರಿ ನೀಡಲಾಗಿದೆ. ಈ ಗುರಿಯನ್ನು 100 ದಿನಗಳಲ್ಲಿ ತಲುಪಲಾಗುವುದು ಎಂದು ತಿಳಿಸಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವಿಭಾಗೀಯ ಸಹ ನಿರ್ದೇಶಕರಾದ ಡಾ. ಕೆ ಹೆಚ್ ಪ್ರಸಾದ್ ಅವರು ಮಾತನಾಡಿ ಪ್ರಪಂಚದಲ್ಲಿ ಹೆಚ್ಚು ನರಲಿಸುವ ಹಾಗೂ ಮಾರಣಾಂತಿಕ ಕಾಯಿಲೆಯಲ್ಲಿ ಪ್ರಥಮ ಸ್ಥಾನ ಕ್ಷಯ ರೋಗ ಆಗಿದೆ. ಒಬ್ಬ ರೋಗಿ ತನ್ನ ಸುತ್ತ ಮುತ್ತ ಇರುವ 40 ಜನರಿಗೆ ಇದನ್ನು ಹರಡಿಸುವ ಸಾಧ್ಯತೆ ಇರುತ್ತದೆ. ಇದನ್ನು ಸಂಪೂರ್ಣ ಹೋಗಲಾಡಿಸಲು 8 ತಿಂಗಳು ಮಾತ್ರೆ ತೆಗೆದುಕೊಳ್ಳಬೇಕು. ಆದರೆ ಕೆಲವರು ಸ್ವಲ್ಪ ದಿನ ತೆಗೆದುಕೊಂಡು ನಿಲ್ಲಿಸುತ್ತಾರೆ. ಇದರಿಂದ ಕೆಲವು ದಿನಗಳ ಕಾಲ ವಾಸಿ ಆದ ಹಾಗೆ ಇದ್ದು ನಂತರ ಮತ್ತೆ ಬರುತ್ತದೆ. ಮುಂದುವರಿದ ರಾಷ್ಟ್ರಗಳಲ್ಲಿ ಕ್ಷಯ ರೋಗ ಇಲ್ಲ. ಹಿಂದುಳಿದ ಹಾಗೂ ಮುಂದುವರಿಯುತ್ತಿರುವ ರಾಷ್ಟ್ರಗಳಲ್ಲಿ ಇದು ಇದೆ. ಹೆಚ್ಚು ಜನಸಂಖ್ಯೆ ಇರುವ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಗ್ರಾಮ ಮಟ್ಟದಲ್ಲಿ ಕ್ಷಯ ರೋಗ ಪತ್ತೆ ಮಾಡಿ ಚಿಕಿತ್ಸೆ ನೀಡಿ ಕ್ಷಯ ರೋಗ ಮುಕ್ತ ಗ್ರಾಮವನ್ನಾಗಿ ಮಾಡಬೇಕು. ಹೀಗೆ ಎಲ್ಲಾ ಗ್ರಾಮಗಳನ್ನು ಮಾಡಿದರೆ ಜಿಲ್ಲೆಯನ್ನು ಕ್ಷಯ ರೋಗ ಮುಕ್ತ ಮಾಡಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕ್ಷಯ ರೋಗ ನಿರ್ಮೂಲನಾಧಿಕಾರಿಗಳಾದ ಡಾ. ಜಯಂತ್ ಎಂ ಎಸ್, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ. ಬೃಂದಾ, ಸೇರಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.