ಮೈಸೂರು(Mysuru): ಎಲ್ಲರೂ ಸ್ನೇಹ, ಸೌಹಾರ್ದ ಹಾಗೂ ಗೌರವದಿಂದ ಬಾಳಬೇಕು. ಈ ಸಂದೇಶವನ್ನು ನೀಡುವುದಕ್ಕಾಗಿಯೇ ಕ್ರಿಸ್ಮಸ್ ಆಚರಿಸಲಾಗುತ್ತದೆ ಎಂದು ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಎ.ಕೆ.ವಿಲಿಯಂ ತಿಳಿಸಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಕ್ರಿಸ್ಮಸ್ ಸಂದೇಶ ನೀಡಿದ ಅವರು, ಸೌಹಾರ್ದ, ಸಮಾನತೆ ಹಾಗೂ ಮೌಲ್ಯಗಳು ನಮ್ಮ ಆದ್ಯತೆಯಾಗಬೇಕು. ಇತ್ತೀಚಿನ ವರ್ಷಗಳಲ್ಲಿ ಸಾಂಸ್ಕೃತಿಕ ಉತ್ಸವದ ರೀತಿ ಕ್ರಿಸ್ಮಸ್ ಅನ್ನು ಆಚರಣೆಯಾಗುತ್ತಿದೆ. ಇದು ಸಂತೋಷದ ಸಂಗತಿಯಾಗಿದೆ ಎಂದರು.
ಇಂದು ಎಲ್ಲವೂ ಇದೆ. ತಂತ್ರಜ್ಞಾನ ಮುಂದುವರಿದಿದೆ. ಸಂಪರ್ಕ ಬಹಳ ಸುಲಭವಾಗಿದೆ. ಆದರೆ, ಸಮಾಜ ಹಾಗೂ ಕುಟುಂಬದಲ್ಲಿ ಶಾಂತಿ-ಸಮಾಧಾನ ಬಹಳ ಅಗತ್ಯವಿದೆ. ದೇವರು ಎಲ್ಲವನ್ನೂ ಕೊಟ್ಟಿದ್ದಾರೆ. ನೆಮ್ಮದಿಯೇ ಇಲ್ಲದಿದ್ದರೆ ಅದೇನು ಜೀವನ? ನೆಮ್ಮದಿಯು ಒಳ್ಳೆಯ ಮನಸ್ಸಿದ್ದರೆ ಮಾತ್ರ ಬರುತ್ತದೆ. ಎಲ್ಲವೂ ನಾನೇ, ನನಗೇ ಬೇಕು ಎಂಬ ಸ್ವಾರ್ಥ–ನಾನತ್ವ ಇಟ್ಟುಕೊಂಡರೆ ಅಲ್ಲಿ ಶಾಂತಿಗೆ ಅವಕಾಶ ತುಂಬಾ ಕಡಿಮೆ ಎಂದು ತಿಳಿಸಿದರು.
ಇಂದು ಅನ್ವೇಷಣೆಗಳು ಬಹಳ ನಡೆದಿವೆ. ಎರಡು ದಶಕಗಳ ಹಿಂದೆ ಅಸಾಧ್ಯ ಎಂದುಕೊಂಡಿದ್ದೆಲ್ಲ ಇಂದು ಸಾಧ್ಯವಿದೆ. ಆದರೆ, ಮೌಲ್ಯಗಳ ವಿಷಯಯದಲ್ಲಿ ನಾಲ್ಕು ಹೆಜ್ಜೆ ಮುಂದಿಟ್ಟು, ಎಂಟು ಗೆಜ್ಜೆ ಹಿಂದಿದ್ದೇವೆ. ನಮ್ಮ ನಡುವಿನ ಸಂಬಂಧಗಳು ಚೆನ್ನಾಗಿರಬೇಕಲ್ಲವೇ? ಆದರೆ, ಹಂಚಿಕೊಳ್ಳುವ ಹಾಗೂ ಗೌರವಿಸುವ ಮನೋಭಾವ ಕಡಿಮೆಯಾಗುತ್ತದೆ. ಹೃದಯಗಳು ಕಲ್ಲಾಗುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಂತಿಯತ ಸಮಾಜದ ನಿರ್ಮಾಣ ಮಾಡುವುದು ಎಲ್ಲರಿಗೂ ಸೇರಿದ್ದು. ವೈಯಕ್ತಿಕವಾಗಿ ಆ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಧರ್ಮ ಧರ್ಮಗಳಲ್ಲಿ ವೈವಿಧ್ಯತೆ ಇರಬಹುದು. ಆದರೆ, ಒಂದು ದೊಡ್ಡ ಕುಟುಂಬದಲ್ಲಿರುವ ನಾವೆಲ್ಲರೂ ಒಂದೇ. ಒಂದೇ ಸೂರಿನಲ್ಲಿ ಇರುವಂತಹ ಪ್ರಜೆಗಳು. ಎಲ್ಲರೂ ನಮ್ಮವರು ಎನ್ನುವುದು ಎಲ್ಲರಲ್ಲೂ ಬಂದರೆ, ಸಮಾಜ ಚೆನ್ನಾಗಿರುತ್ತದೆ ಎನ್ನುವುದೇ ಕ್ರಿಸ್ಮಸ್ ಸಂದೇಶವಾಗಿದೆ ಎಂದರು.
ಕೋವಿಡ್ ಮಾರ್ಗಸೂಚಿ ಪಾಲಿಸಿ
ಕೋವಿಡ್ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷ ಆಚರಣೆ ಸರಳವಾಗಿತ್ತು. ಈ ಬಾರಿ ಅದ್ಧೂರಿಯಾಗಿ ಎಲ್ಲ ಕಡೆಯೂ ನಡೆಯುತ್ತಿದೆ. ಡಿ.25ರಂದು ಬೆಳಿಗ್ಗೆ 5ರಿಂದ ಬೆಳಿಗ್ಗೆ 9ರವರೆಗೆ ಪೂಜೆ ನೆರವೇರಲಿದೆ. ಮತ್ತೆ ಸಂಜೆಯೂ ಪೂಜೆ ನಡೆಯಲಿದೆ. ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸುವುದು ಮೊದಲಾದ ಮಾರ್ಗಸೂಚಿ ಪಾಲಿಸಲಾಗುತ್ತದೆ ಎಂದು ತಿಳಿಸಿದರು.
ಆಲ್ಫ್ರೆಡ್ ಜಾನ್ ಮೆಂಡೋನ್ಸ, ಡೊಮೆನಿಕ್ ವಾಸು, ಜೋಸೆಫ್ ಪಾಕಿರಾಜ್, ವಿಜಯಕುಮಾರ್, ಕ್ಲಿಪರ್ಡ್ ಇದ್ದರು.