ಮನೆ ಸಾಹಿತ್ಯ ಕನ್ನಡದ ಹಬ್ಬವಾದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ: ದಿನೇಶ್ ಗೂಳಿಗೌಡ

ಕನ್ನಡದ ಹಬ್ಬವಾದ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯ: ದಿನೇಶ್ ಗೂಳಿಗೌಡ

0

ಮಂಡ್ಯ: ನಗರದಲ್ಲಿ ಡಿಸೆಂಬರ್ ೨೦, ೨೧, ೨೨ರಂದು ಜರುಗಲಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಹಬ್ಬ. ನಮ್ಮ ಮನೆಯ ಹಬ್ಬ. ಕುಟುಂಬದವರೊಂದಿಗೆ ಹಬ್ಬ ಆಚರಣೆ ಮಾಡುವಂತೆ ಜಿಲ್ಲೆಯ ಜನತೆ ಒಟ್ಟಾಗಿ ಕನ್ನಡ ಹಬ್ಬವನ್ನು ಆಚರಣೆ ಮಾಡಬೇಕು ಎಂದು ಶಾಸಕರು ಹಾಗೂ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರು ಹೇಳಿದರು.

Join Our Whatsapp Group

ನಗರದ ಹೊರವಲಯದ ಅಮರಾವತಿ ಹೋಟೆಲ್ ಹೋಟೆಲ್ ನಲ್ಲಿ ಹಮ್ಮಿಕೊಂಡಿದ್ದ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಮಾಧ್ಯಮ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಸಮ್ಮೇಳನದ ಯಶಸ್ವಿಗೆ ಮಾಧ್ಯಮದ ಪಾತ್ರ ಬಹಳ ಮುಖ್ಯ. ಸಾಹಿತ್ಯ ಸಮ್ಮೇಳನದ ಕುರಿತು ಮಾಧ್ಯಮದಲ್ಲಿ ವ್ಯಾಪಕ ಪ್ರಚಾರ ನೀಡುವ ಮೂಲಕ ಸಮ್ಮೇಳನದ ಯಶಸ್ವಿಗೆ ಮಾಧ್ಯಮದವರು ಸಹಕರಿಸಬೇಕು ಎಂದರು.

ಇದು ಕನ್ನಡದ ಹಬ್ಬ, ನಮ್ಮ ಮನೆ ಹಬ್ಬ. ಕನ್ನಡದ ತೇರು ಎಳೆಯಲು ಎಲ್ಲರ ಸಹಕಾರ ಮುಖ್ಯ. ಮಾಧ್ಯಮದಲ್ಲಿ ಹೆಚ್ಚಿನ ಪ್ರಚಾರ ನೀಡಿ ಸಕ್ಕರೆಯ ನಾಡು ಅಕ್ಕರೆಯ ಬೀಡಿನ ಗಮಲನ್ನು ಜಗಕ್ಕೆ ಪಸರಿಸುವಂತೆ ಮಾಡಬೇಕು ಎಂದು ಹೇಳಿದರು.

ಮಂಡ್ಯ ಆತಿಥ್ಯಕ್ಕೆ ಹೆಸರುವಾಸಿ. ರಾಜ್ಯ, ಹೊರರಾಜ್ಯದಿಂದ ಆಗಮಿಸುವ ಸಾಹಿತ್ಯಾಸಕ್ತರು, ಮಾಧ್ಯಮ ಮಿತ್ರರ ಆತಿಥ್ಯಕ್ಕೆ ಯಾವುದೇ ಕುಂದುಕೊರತೆ ಉಂಟಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಯಾವುದೇ ರೀತಿಯ ಗೊಂದಲಗಳಿಗೆ ಆಸ್ಪದ ನೀಡಬಾರದು ಎಂದು ಸೂಚಿಸಿದರು.

ರಾಜ್ಯ, ಜಿಲ್ಲಾ, ತಾಲೂಕು ಹಾಗೂ ಸ್ಥಳೀಯ ಪತ್ರಿಕೆ ಮತ್ತು ಟಿವಿ ಚಾನೆಲ್ ಗಳು ಹೆಚ್ಚಿನ ಪ್ರಚಾರ ನೀಡಿ ನುಡಿ ಹಬ್ಬವನ್ನು ಯಶಸ್ವಿಗೊಳಿಸಬೇಕು. ಎನ್ ಸಿಸಿ, ಸ್ಕೌಟ್ಸ್ ಅಂಡ್ ಗೈಡ್ಸ್, ಹಾಗೂ ಎನ್ ಜಿಒಗಳಿಂದ ಸ್ವಯಂ ಸೇವಕರನ್ನು ನೇಮಿಸುಕೊಳ್ಳಬೇಕು. ನಮ್ಮನೆ ಕಾರ್ಯಕ್ರಮದಂತೆ ಕಾರ್ಯ ನಿರ್ವಹಿಸಬೇಕು. ಮಾಧ್ಯಮ ಸಂಸ್ಥೆಗಳಿಂದ ಸಮ್ಮೇಳನಕ್ಕೆ ಆಗಮಿಸುವವವರಿಗೆ ಸೂಕ್ತ ವಸತಿ ವ್ಯವಸ್ಥೆ, ವಾಹನ, ಊಟ, ತಿಂಡಿ ವ್ಯವಸ್ಥೆ ಆಗಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.

ಸಭೆಯಲ್ಲಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಕಾಶ್, ಜಿಲ್ಲಾ ಕಸಾಪ ಸಂಚಾಲಕರಾದ ಮೀರ ಶಿವಲಿಂಗಯ್ಯ, ಉಪವಿಭಾಗಾಧಿಕಾರಿ ಶಿವಮೂರ್ತಿ, ವಾರ್ತಾಧಿಕಾರಿ ನಿರ್ಮಲಾ ಸೇರಿದಂತೆ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.

ಸಮ್ಮೇಳನದ ಪ್ರಚಾರ ಕಾರ್ಯ ಆರಂಭ: ಜಿಲ್ಲಾಧಿಕಾರಿ ಕುಮಾರ್

ಸಾಹಿತ್ಯ ಸಮ್ಮೇಳನದ  ಪ್ರಚಾರ ಕಾರ್ಯ ಆರಂಭಿಸಲಾಗಿದೆ. ರಾಜ್ಯದ ನಾನಾ ಭಾಗಗಳಲ್ಲಿ ಸಂಚರಿಸುತ್ತಿರುವ ಜ್ಯೋತಿ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಗುತ್ತಿದೆ. ಎಲ್ಲೆಡೆ ನಿರೀಕ್ಷೆಗೂ ಮೀರಿ ರಥವನ್ನು ಬರಮಾಡಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕುಮಾರ್ ಅವರು ಹೇಳಿದರು.

ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಸಾಕಷ್ಟು ಒತ್ತು ನೀಡಲಾಗುತ್ತಿದೆ. ಪ್ರಚಾರದ ರೂವಾರಿಗಳು ಮಾಧ್ಯಮದವರೇ. ಜನರನ್ನು ತಲುಪಲು ಮಾಧ್ಯಮಗಳ ಸಹಕಾರ ಬಹಳ ಮುಖ್ಯ. ಸಮ್ಮೇಳನದ ಯಶಸ್ವಿಗೆ ಎಲ್ಲರ ಸಲಹೆಗಳನ್ನು ಪಡೆದುಕೊಂಡು ಕಾರ್ಯರೂಪಕ್ಕೆ ತರಲಾಗುವುದು ಎಂದರು.

ಮಾಧ್ಯಮ ಸಮನ್ವಯ ಸಮಿತಿ ಬಹಳ ಶಿಸ್ತುಬದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಅಧ್ಯಕ್ಷರಾದ ದಿನೇಶ್ ಗೂಳಿಗೌಡ ಅವರ ಕಾರ್ಯಕ್ಕೆ ಜಿಲ್ಲಾಡಳಿತ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ರಾಜ್ಯ, ರಾಷ್ಟ್ರದ ನಾನಾ ಭಾಗಗಳಿಂದ ಬರುವವರಿಗೆ ಸಕಲ ವ್ಯವಸ್ಥೆ ಮಾಡಲಾಗುವುದು. ಊಟ, ಪುಸ್ತಕ ಮಳಿಗೆ, ವೇದಿಕೆ ಒಂದೇ ಕಡೆ ಇರುವಂತೆ ಜಾಗ ಗುರುತಿಸಲಾಗಿದೆ. ಎಲ್ಲಾ ಆಯಮದಲ್ಲಿ ಚರ್ಚಿಸಿ, ತಾಂತ್ರಿಕ ವರದಿ ಆಧರಿಸಿ ಜಾಗ ಗುರುತಿಸಲಾಗಿದೆ. ಸಂಚಾರ ದಟ್ಟಣೆ ಆಗದಂತೆ ಕ್ರಮವಹಿಸಲಾಗುವುದು ಎಂದರು.