ಮನೆ ರಾಷ್ಟ್ರೀಯ ಮುಂದಿನ ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ – ನಿತಿನ್ ಗಡ್ಕರಿ

ಮುಂದಿನ ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ – ನಿತಿನ್ ಗಡ್ಕರಿ

0

ನವದೆಹಲಿ : ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಬೆಲೆ ಪೆಟ್ರೋಲ್-ಡೀಸೆಲ್ ಬೆಲೆಗೆ ಸಮನಾಗಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲೆಕ್ಟ್ರಿಕ್ ವಾಹನಗಳನ್ನು ಬಿಡುಗಡೆ ಮಾಡಿದಾಗ, ಬ್ಯಾಟರಿ ಬೆಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ 150 ಡಾಲರ್‌ ಆಗಿತ್ತು. ಇಂದು ಅದು ಪ್ರತಿ ಕಿಲೋವ್ಯಾಟ್ ಗಂಟೆಗೆ 55 ಡಾಲರ್‌ನಿಂದ 65 ಡಾಲರ್‌ಗೆ ಇಳಿಕೆಯಾಗಿದೆ.

ಮುಂಬರುವ ನಾಲ್ಕರಿಂದ ಆರು ತಿಂಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳು ಪೆಟ್ರೋಲ್-ಡೀಸೆಲ್ ಬೆಲೆಗೆ ಸಮಾನವಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆ ಮಾಡುವುದು ಆರ್ಥಿಕತೆ ದೃಷ್ಟಿಯಿಂದ ಹಾನಿಕಾರಕ. ಭಾರತವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯು ಆರ್ಥಿಕ ಹೊರೆಯಾಗಿದೆ. ಇಂಧನ ಆಮದಿಗೆ ವಾರ್ಷಿಕವಾಗಿ 22 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ.

ಹೀಗಾಗಿ ಎಥೆನಾಲ್, ಸಿಎನ್‌ಜಿ ಅಥವಾ ಐಸೊಬುಟನಾಲ್‌ನಲ್ಲಿ ಚಲಿಸುವ ಎಲೆಕ್ಟ್ರಿಕ್ ಟ್ರಾಕ್ಟರ್‌ಗಳು ಮತ್ತು ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಟ್ರಾಕ್ಟರ್ ತಯಾರಕರು ಮತ್ತು ಕೃಷಿ ಸಂಶೋಧಕರಿಗೆ ಸಭೆಯಲ್ಲಿ ಹೇಳಿದ್ದೇನೆ ಎಂದರು.

ಈ ನಾವೀನ್ಯತೆಗಳು ಡೀಸೆಲ್ ಆಮದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ. ನಾನು ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಭಾರತೀಯ ಆಟೋಮೊಬೈಲ್ ಉದ್ಯಮದ ಗಾತ್ರ 14 ಲಕ್ಷ ಕೋಟಿ ರೂ. ಇತ್ತು.

ಈಗ ಭಾರತೀಯ ಆಟೋಮೊಬೈಲ್ ಉದ್ಯಮದ ಗಾತ್ರ 22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಪ್ರಸ್ತುತ ಅಮೆರಿಕದ ಆಟೋಮೊಬೈಲ್ ಉದ್ಯಮದ ಗಾತ್ರ 78 ಲಕ್ಷ ಕೋಟಿ ರೂ. ಇದ್ದರೆ ಚೀನಾ 47 ಲಕ್ಷ ಕೋಟಿ ರೂ. ಹೊಂದಿದ್ದು, ಭಾರತ 3ನೇ ಸ್ಥಾನದಲ್ಲಿದೆ.