ಮಂಡ್ಯ: ಸಚಿವ ಚಲುವರಾಯಸ್ವಾಮಿ ವಿರುದ್ಧ ಜೆಡಿಎಸ್ ಮಾಜಿ-ಹಾಲಿ ಶಾಸಕರು ತೀವ್ರ ವಾಗ್ದಾಳಿ ನಡೆಸಿದ್ದು, ಸುಳ್ಳಿನಿಂದ ಹೆಂಗಸರು ತರ ಕಣ್ಣಿಣು ಹಾಕಿ ಚಲುವರಾಯಸ್ವಾಮಿ ಗೆದ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ಮಂಡ್ಯದ ಪತ್ರಕರ್ತರ ಭವನದಲ್ಲಿ ಜೆಡಿಎಸ್ ಮಾಜಿ-ಹಾಲಿ ಶಾಸಕರು ಜಂಟಿ ಸುದ್ದಿಗೋಷ್ಟಿ ನಡೆಸಿ ಚಲುವರಾಯಸ್ವಾಮಿ ಹಾಗೂ ನರೇಂದ್ರ ಸ್ವಾಮಿ ವಿರುದ್ಧ ಹರಿಹಾಯ್ದಿದ್ದಾರೆ.
ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಬಗ್ಗೆ ಏಕವಚನದಲ್ಲಿ ಮಾತನಾಡಿರುವ ಕುರಿತು ಪ್ರತಿಕ್ರಿಯಿಸಿರುವ ನಾಗಮಂಗಲ ಕ್ಷೇತ್ರದ ಮಾಜಿ ಶಾಸಕ ಸುರೇಶ್ ಗೌಡ, ದೇವೇಗೌಡರ ಬೆನ್ನಿಗೆ ಚೂರಿ ಹಾಕಿ ಹೋದವರಿಗೆ ದೇವೇಗೌಡರ ಬಗ್ಗೆ ಮಾತನಾಡೋಕೆ ಯೋಗ್ಯತೆ ಬೇಕು ಎಂದು ಕಿಡಿಕಾರಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಯಾವ ಯಾವ ವ್ಯಕ್ತಿ ಹೇಗೆ ರಾಜಕಾರಣದಲ್ಲಿ ಮುಂದೆ ಬಂದಿದ್ದಾರೆ ಅಂತ ಗೊತ್ತಿದೆ. ನಾನು ರಾಜಕಾರಣಿ ಆಗಬೇಕು ಅಂತ ಬಂದವನಲ್ಲ. ನನಗೆ 2004 ರಲ್ಲಿ ನಮ್ಮ ಜಿಲ್ಲೆಯ ಸಿಎಂ ಆಗಿದ್ದವರಿಗೆ ನಾನು ಮೊದಲ ಬಾರಿ ಕಾಂಗ್ರೆಸ್ ಗೆ ಸಪೋರ್ಟ್ ಮಾಡಿದ್ದೆ. ಕಾಂಗ್ರೆಸ್ ಪಕ್ಷಕ್ಕೆ ಸಪೋರ್ಟ್ ಮಾಡಿದ್ದಕ್ಕೆ ನಾಗಮಂಗಲಕ್ಕೆ ಬರ ಮಾಡಿಕೊಂಡ್ರಿ. ಇತಿಹಾಸದಲ್ಲಿ ನಾಗಮಂಗಲ ತಾಲ್ಲೂಕಿನಲ್ಲಿ ಯಾರು ಗೆದ್ದಿರಲಿಲ್ಲ. ನಾನೇ ಪ್ರಪ್ರಥಮ ಶಾಸಕ. ಪ್ರಬಲ ಮಂತ್ರಿ ಹೇಳಿಕೊಳ್ಳುತ್ತಿರುವವರ ವಿರುದ್ಧ ಮೊದಲ ಬಾರಿ ಗೆದ್ದು ಶಾಸಕನಾದೆ. ಆದರೆ ಜನರು ಕೊಟ್ಟ ಅಧಿಕಾರವನ್ನು ದುಡ್ಡಿಗೆ ಮಾರಿ ದೇವೇಗೌಡರ ಬೆನ್ನಿಗೆ ಚೂರಿ ಹಾಕಿದ್ರು. ಇವತ್ತು ನನ್ನ 50 ಸಾವಿರದಲ್ಲಿ ಸೋಲಿಸಿದ್ದಿರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯದಲ್ಲಿ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ, ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೊಸ ಕಥೆ ಶುರುಮಾಡಿದ್ದಾರೆ. ಮದ್ದೂರು ಶಾಸಕ ಉದಯ್ ರನ್ನು ಟಾರ್ಗೆಟ್ ಮಾಡಿ ಬಿಜೆಪಿಯ ಸ್ವಾಮಿಯನ್ನು ಹೈಲೆಟ್ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ದೇವೇಗೌಡರು ಪಕ್ಷ ಹೇಗಿಟ್ಟುಕೊಳ್ಳಬೇಕು ಅನ್ನುವುದರ ಬಗ್ಗೆ ಚಲುವರಾಯಸ್ವಾಮಿ ಸಲಹೆ ಕೊಟ್ಟಿದ್ದಾರೆ. ಇತಿಮಿತಿ ಅರಿವಿಲ್ಲದೆ ಚಲುವರಾಯಸ್ವಾಮಿ ಮಾತನಾಡುತ್ತಾರೆ. ಕಾಂಗ್ರೆಸ್-ಬಿಜೆಪಿಯ ಹಲವು ನಾಯಕರು ದೇವೇಗೌಡರಿಂದ ಟ್ರೈನಿಂಗ್ ಪಡೆದಿದ್ದಾರೆ. ಮಾತನಾಡುವಾಗ ಸ್ವಲ್ಪ ವಿವೇಕ ಇರಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೊದಲು ಪಕ್ಷಕ್ಕೆ ನಿಷ್ಠೆಯಿಂದ ಇದ್ದಿರಾ? ಎಂದು ಪ್ರಶ್ನಿಸಿದ ಅವರು, ಜೆಡಿಎಸ್ ನಲ್ಲಿದ್ದಾಗಲು ನಿಷ್ಟೆ ಇಲ್ಲ, ಕಾಂಗ್ರೆಸ್ ನಲ್ಲು ಇಲ್ಲ. ಬಿಜೆಪಿ ಬಗ್ಗೆ ಮಾತನಾಡುವವರು ಸ್ವಾಮಿ ಕರೆದು ಕೊಂಡು ಮನ್ಮುಲ್ ಚುನಾವಣೆ ತಂತ್ರಾ ಮಾಡಿದ್ದಾರೆ. ಚಲುವರಾಯಸ್ವಾಮಿ ಮಂಡ್ಯದಲ್ಲಿ ಹೊಸ ಕಥೆ ಶುರುಮಾಡಿದ್ದಾರೆ. ಜಿಲ್ಲೆಯ ಶಾಸಕರನ್ನು ನೆಮ್ಮದಿಯಾಗಿ ಅಧಿಕಾರ ಮಾಡಲು ಬಿಡ್ತಿಲ್ಲ ಎಂದು ಕಿಡಿಕಾರಿದರು.
ಸಚಿವ ಚಲುವರಾಯಸ್ವಾಮಿ ವಿರುದ್ದ ಕೆ.ಆರ್.ಪೇಟೆ ಕ್ಷೇತ್ರದ ಶಾಸಕ ಹೆಚ್.ಟಿ.ಮಂಜು ವಾಗ್ದಾಳಿ ನಡೆಸಿ, ಉಂಡಮನೆಗೆ ಕನ್ನ ಹಾಕಿದವರು ಚಲುವರಾಯಸ್ವಾಮಿ. ತತ್ವ ಸಿದ್ದಾಂತದ ಮೇಲೆ ರಾಜಕಾರಣ ಮಾಡುವ ಚಲುವರಾಯಸ್ವಾಮಿ. 2019ರ ಕೆ.ಆರ್.ಪೇಟೆಯಲ್ಲಿ ಬೈ ಎಲೆಕ್ಷನ್ ನಲ್ಲಿ ಏನು ಮಾಡಿದ್ರಿ. ಉಂಡ ಮನೆಗೆ ಕನ್ನ ಹಾಕುವ ಕೆಲಸ ಮಾಡಬೇಡಿ ಎಂದು ಹರಿಹಾಯ್ದಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ದೇವೇಗೌಡ್ರು ಏನು ಅಂತ ಗೊತ್ತಿದೆ. ಸ್ವರ್ಥಕ್ಕಾಗಿ ಜನರನ್ನ ದಿಕ್ಕು ತಪ್ಪಿಸಲು ಈ ತರಹ ರಾಜಕಾರಣ ಮಾಡಬೇಡಿ. ಜಿಲ್ಲೆಯ ಅಭಿವೃದ್ಧಿ ಕಡೆ ಗಮನ ಹರಿಸಿ. ಸದನದಲ್ಲಿ ನಾವು ಮಾತನಾಡಲು ಅವಕಾಶ ಸಿಕ್ಕಿಲ್ಲ ಎಂದರು.
ಶಾಸಕ ನರೇಂದ್ರ ಸ್ವಾಮಿ ವಿರುದ್ಧ ಮಳವಳ್ಳಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಮಾತನಾಡಿ, ನಾಚಿಕೆ ಮಾನ-ಮರ್ಯಾದೆ ಇಲ್ಲದ ಶಾಸಕ ನರೇಂದ್ರ ಸ್ವಾಮಿ. ಒಂದು ಕಾಲದಲ್ಲಿ ಕುಮಾರಣ್ಣ ಕಾಲು ಹಿಡಿದವ ಇಂದು ಏಕವಚನದಲ್ಲಿ ಮಾತನಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಶಾಸಕರು ಹೊಸ ಅನುದಾನ ತರಲು ಸಾಧ್ಯವಿಲ್ಲ. ಗ್ಯಾರಂಟಿಗಾಗಿ ದುಡ್ಡ ಹೊಂದಿಸ್ತಿದ್ದಾರೆ ಅನುದಾನ ನೀಡಲ್ಲ ಎಂದು ಸಿಎಂ ತಿಳಿಸಿದ್ದಾರೆ. ನಾವು ತಂದ ಅಭಿವೃದ್ಧಿ ಕಾಮಗಾರಿಯನ್ನು ಸಹ ತಡೆಹಿಡಿದ್ದಾರೆ. ಇದಕ್ಕೆ ಏನು ಕಾರಣ ಶಾಸಕರು ಉತ್ತರ ಕೊಡಲಿ ಎಂದು ಆಗ್ರಹಿಸಿದರು.
ಕುಮಾರಸ್ವಾಮಿ ಬಗ್ಗೆ ಮಳವಳ್ಳಿ ಶಾಸಕರಿಗೆ ಗೊತ್ತಿಲ್ಲ. ಮೂರು ಬಾರಿ ಶಾಸಕರಾಗಿ ಒಂದು ಬಾರಿ ಮಂತ್ರಿಯಾಗಿದ್ದಾರೆ. ಪಾಪಾ ಯಡಿಯೂರಪ್ಪ ಸರ್ಕಾರನ ನಾವು ಹುಟ್ಟಿಸಿದ ಸರ್ಕಾರ ಅಂತ ಹೇಳಿ ದೊಡ್ಡ ಗಲಾಟೆಮಾಡ್ಬಿಟ್ಟು ಅಸೆಂಬ್ಲಿಯಲ್ಲಿ ಬಟ್ಟೆಹರಿದುಕೊಂಡಿದ್ರು. 11 ಜನ ಕುಮಾರಸ್ವಾಮಿ ಅವರ ಕಾಲಿಗೆ ಬಿದ್ದಿದ್ರು. ಅವತ್ತು ಕುಮಾರಣ್ಣನ ಹತ್ತಿರ ಯಾಕೆ ಬಂದಿದ್ರಿ ನಿಮಗೆ ನಾಚಿಕೆ ಮಾನ ಮರ್ಯಾದೆ ಇಲ್ವಾ? ಕುಮಾರಣ್ಣ ದೇವರ ಅಂತ ಪ್ರಶ್ನೆ ಮಾಡ್ತಿರಾ. ಅನರ್ಹರಾಗಿದ್ದೀವಿ. ಉಳಿಸಿಕೊಡಿ ಅಂತ ಕಾಲು ಹಿಡಿದುಕೊಂಡ್ರಲ್ಲ. ನಿಮ್ಮೊಬ್ಬರನ್ನೆ ಗೋವಾದಿಂದ ಪ್ರತ್ಯೇಕವಾಗಿ ಈಗಲ್ಟನ್ ಗೆ ಕರೆಸಿದ್ರಲ್ವಾ ಅವತ್ತು ಎಷ್ಟು ದುಡ್ಡು ಇಸ್ಕೊಂಡ್ರಿ ಕುಮಾರಣ್ಣ ಹತ್ರ ಎಂದು ಪ್ರಶ್ನೆ ಮಾಡಿದರು.
ಏಕವಚನದಲ್ಲಿ ಕುಮಾರಣ್ಣ ಬಗ್ಗೆ ಮಾತನಾಡ್ತಿಯಲ್ಲ ನಿನಗೆ ಮಾನ ಮರ್ಯಾದೆ ಇದ್ಯಾ? ಅವತ್ತು ದುಡ್ಡು ಇಸ್ಕೊಬೇಕಾದ್ರೆ ಕುಮಾರಣ್ಣ ದೇವರು ಇವತ್ತು ದೇವರಲ್ಲ ಅಲ್ವಾ ? ಮಳವಳ್ಳಿ ಶಾಸಕರೇ ದುರಹಂಕಾರದ ನಡೆತೆ ಬಿಟ್ಟು ಕೆಲಸ ಮಾಡಿ. ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದ್ರೆ ಎಚ್ಚರಿಕೆಯಿಂದ ಮಾತನಾಡಿ ಎಂದು ಎಚ್ಚರಿಕೆ ನೀಡಿದರು.