ಹೊಸದಾಗಿ ರಸ್ತೆಗೆ ಇಳಿಯುವ ಐಷಾರಾಮಿ ಕಾರು, ವಾಣಿಜ್ಯ (ಸಾರ್ವಜನಿಕ) ಬಳಕೆಯ ಸಾರಿಗೆ ಬಸ್ ಗಳ ಪೈಕಿ ಶೇ. 30-40 ವಾಹನಗಳು ರಾಜ್ಯದಲ್ಲಿ ತೆರಿಗೆ ದುಬಾರಿ ಎಂಬ ಕಾರಣಕ್ಕೆ ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸಿಕೊಳ್ಳುತ್ತಿರುವ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವಾಗುತ್ತಿದೆ.
ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಅಸ್ಸಾಂ, ಬಿಹಾರ್, ಡಿಯು-ಡಮನ್, ಗೋವಾ, ಪುದುಚೆರಿಗಳ ತೆರಿಗೆ ದರ ವಿನ್ಯಾಸಕ್ಕೆ ಹೋಲಿಸಿದರೆ ಕರ್ನಾಟಕದಲ್ಲಿ ತೆರಿಗೆ ಹೆಚ್ಚಿದೆ. ಹೀಗಾಗಿ ಕಡಿಮೆ ತೆರಿಗೆ ಇರುವ ರಾಜ್ಯಗಳಲ್ಲಿ ಐಷಾರಾಮಿ ವಾಹನ ಮಾಲೀಕರು ವಾಹನ ನೋಂದಣಿ ಮಾಡಿಸುತ್ತಿರುವ ಪರಿಣಾಮ ರಾಜ್ಯದ ಬೊಕ್ಕಸಕ್ಕೆ ಭಾರೀ ನಷ್ಟ ಆಗುತ್ತಿದೆ.
2023-24 ಹಾಗೂ 2024-25ರಲ್ಲಿ ಅಂದಾಜು 3000ಕ್ಕೂ ಹೆಚ್ಚು ಸಾರಿಗೆ ವಾಹನಗಳು ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಕೊಂಡು ರಾಜ್ಯದಲ್ಲಿ ಓಡಾಡುತ್ತಿವೆ. ಹೊರರಾಜ್ಯದಲ್ಲಿ ಪ್ರತಿ ವಾಹನಕ್ಕೆ ವಾರ್ಷಿಕ ಅಂದಾಜು 16 ಸಾವಿರ ರೂ. ತೆರಿಗೆಯಂತೆ 3,000 ವಾಹನಗಳಿಗೆ ವಾರ್ಷಿಕ 2.40 ಕೋಟಿ ರೂ. ಟ್ಯಾಕ್ಸ್ ಪಾವತಿಯಾಗುತ್ತದೆ. ಇದಲ್ಲದೆ ನೋಂದಣಿ ಸಮಯದಲ್ಲಿ ಪ್ರಮಾಣ ಪತ್ರ. ಆರ್ಥಿಕ ಸಹಾಯತ್ವ (ಎಚ್‌ಪಿ), ಎಫ್‌ಸಿ ಮತ್ತು ರಹದಾರಿ ಪತ್ರಗಳ ಶುಲ್ಕವಾಗಿ ಪ್ರತಿ ವಾಹನಕ್ಕೆ 5.962 ರೂ. ಆಗುತ್ತದೆ. ಅಂದರೆ 3000 ವಾಹನಗಳಿಗೆ 1,78,85,000 ರೂ. ಪಾವತಿಯಾಗುತ್ತದೆ. ಒಟ್ಟಾರೆ ವಾರ್ಷಿಕ ರಾಜ್ಯದ ಬೊಕ್ಕಸಕ್ಕೆ ಸೇರಬೇಕಾದ 4,18,86,000 ರೂ. ತೆರಿಗೆ ಅನ್ಯರಾಜ್ಯಗಳ ಖಜಾನೆ ಸೇರುತ್ತಿದೆ.
ವಾಹನ ಮಾಲೀಕರ ಕೂಗೇನು?: ಕರ್ನಾಟಕದಲ್ಲಿ ರಿಜಿಸ್ಟ್ರೇಷನ್ ತೆರಿಗೆ ಹೆಚ್ಚಿರುವುದರಿಂದ ನಿರ್ವಾಹವಿಲ್ಲದೆ ಹೊರರಾಜ್ಯಗಳಲ್ಲಿ ನೋಂದಣಿ ಮಾಡಿಸಲಾಗುತ್ತಿದೆ. ಆದ್ದರಿಂದ ರಾಜ್ಯದಲ್ಲಿ ತೆರಿಗೆಯನ್ನು ಶೇ.30 ಇಳಿಸಿ ಬಜೆಟ್‌ನಲ್ಲಿ ಅದೇಶ ಹೊರಡಿಸುವಂತೆ ಖಾಸಗಿ ಸಾರಿಗೆ ವಾಹನ ಮಾಲೀಕರ ಸಂಘ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈ ಸಂಬಂಧ ಫೆ.21ರಂದು (ಶುಕ್ರವಾರ) ನಡೆದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಶೇ.25 ತೆರಿಗೆ ಇಳಿಸುವ ಬಗ್ಗೆ ಭರವಸೆ ಸಿಕ್ಕಿದೆ ಎಂದು ಸಂಘದ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದರ ವ್ಯತ್ಯಾಸ ಎಷ್ಟಿದೆ?: ದೇಶಾದ್ಯಂತ ವಾಹನ ಮಾರಾಟ ಶೋರೂಂ ದರ ಒಂದೇ ರೀತಿ ಇರುತ್ತದೆ. ಆದರೆ, ರಸ್ತೆಗಿಳಿಯಲು ವಿಧಿಸುವ ರಸ್ತೆ ತೆರಿಗೆ ದರ ಬೇರೆ ಬೇರೆಯಾಗಿರುತ್ತದೆ. ಕರ್ನಾಟಕದಲ್ಲಿ ರಸ್ತೆ ತೆರಿಗೆ ಕನಿಷ್ಠ ಶೇ.13ರಿಂದ ಗರಿಷ್ಠ ಶೇ.20 ಇದೆ. ಅರುಣಾಚಲ, ರಾಜಸ್ಥಾನ, ಪುದುಚೆರಿ, ಗುಜರಾತ್, ನಾಗಾಲೆಂಡ್ ಸೇರಿ ಇನ್ನಿತರ ರಾಜ್ಯಗಳಲ್ಲಿ ಅತಿ ಕಡಿಮೆ ಶೇ.6, ಶೇ.8 ಹಾಗೂ ಶೇ.10 ಇದೆ. ಹೀಗಾಗಿಯೇ ವಾಹನ ಮಾಲೀಕರು ನೋಂದಣಿಗಾಗಿ ಹೊರರಾಜ್ಯಗಳತ್ತ ಮುಖ ಮಾಡುತ್ತಿದ್ದಾರೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಕ್ರಮಕ್ಕೂ ರಹದಾರಿ
ರಾಜ್ಯದಲ್ಲಿ ತೆರಿಗೆ ಪ್ರಮಾಣ ದುಪ್ಪಟ್ಟಿರುವುದು ಅನೇಕ ವಾಹನ ಮಾಲೀಕರು ಅಡ್ಡಹಾದಿ ಹಿಡಿದು ವಂಚನೆ ಮಾಡುವುದಕ್ಕೂ ದಾರಿ ಮಾಡಿಕೊಟ್ಟಿದೆ. ಯಾವುದೇ ರಾಜ್ಯದಲ್ಲಿ ವಾಹನ ರಿಜಿಸ್ಟ್ರೇಷನ್ ಮಾಡಿಸಬೇಕಾದರೆ ಖರೀದಿದಾರ ಸ್ಥಳೀಯವಾಗಿ ವಾಸವಿರುವ ದೃಢೀಕರಣ ಪತ್ರ ಸಲ್ಲಿಸಬೇಕು. ಇಂತಹ ನಕಲಿ ವಾಸದ ದೃಢೀಕರಣ ಸೃಷ್ಟಿಸಿಕೊಡಲೆಂದೇ ಹೊರರಾಜ್ಯಗಳಲ್ಲಿ ಮಧ್ಯವರ್ತಿಗಳ ಜಾಲ ಸಕ್ರಿಯವಾಗಿದೆ. ಸದರಿ ರಾಜ್ಯದಲ್ಲಿ ವಾಸವಿರುವವರಂತೆ ವಾಹನ ಖರೀದಿಸುವವರ ಹೆಸರಲ್ಲಿ ನೋಟರಿ ಪ್ರಮಾಣ ಪತ್ರ ಮಾಡಿಸುವ ಜತೆಗೆ ವಿಳಾಸ ದೃಢೀಕರಣಕ್ಕಾಗಿ ಖರೀದಿದಾರನ ಹೆಸರಲ್ಲೇ ಎಲ್‌ಐಸಿ ಪಾಲಿಸಿ ಮಾಡಿಸುತ್ತಾರೆ. ನೋಟರಿ ಪ್ರಮಾಣಪತ್ರ ಹಾಗೂ ಎಲ್‌ಐಸಿ ಪಾಲಿಸಿಯನ್ನೇ ಅಲ್ಲಿನ ಸಾರಿಗೆ ಪ್ರಾದೇಶಿಕ ಕಚೇರಿಗೆ ಸಲ್ಲಿಸಿ ವಾಹನ ನೋಂದಣಿ ಮಾಡಿಸಿಕೊಡುತ್ತಾರೆ. ಅದೇ ರಾಜ್ಯದಲ್ಲಿ ಕಚೇರಿ ಹೊಂದಿದ್ದರೆ ಆ ದಾಖಲಾತಿಗಳನ್ನು ಆಧರಿಸಿಯೇ ನೋಂದಣಿ ಮಾಡಿಸಿಕೊಳ್ಳಬಹುದು
ತೆರಿಗೆ ಇಳಿದರೆ ಪರಿಹಾರ
ದೂರಲಾಗದಲ್ಲಿ ನೋಂದಣಿಯಾದ ವಾಹನ ಕರ್ನಾಟಕಕ್ಕೆ ಸೀಮಿತವಾಗಿ ಓಡಾಡಲು ಅವಕಾಶ ಇಲ್ಲ. ಆದರೆ ಅಲ್ಲಿ ನೋಂದಣಿಯಾದ ವಾಹನಗಳು ಓಡಾಡುತ್ತಿರುವುದು ಮಾತ್ರ ಕರ್ನಾಟಕದಲ್ಲಿ ಹೀಗಾಗಿ ತೆರಿಗೆ ಇಳಿಸಿದರೆ ಕರ್ನಾಟಕದ ಆರ್ ಟಿಒ ಕಚೇರಿಗಳಲ್ಲೇ ಕಾನೂನುಬದ್ಧವಾಗಿ ನೋಂದಣಿಯಾಗಿ ಇಲ್ಲೇ ಓಡಾಡುತ್ತವೆ. ಆಗ ಅನ್ಯರಾಜ್ಯಗಳಲ್ಲಿ ನೋಂದಣಿ ಮಾಡಿಸಿ ಓಡಾಡುವ ಅಗತ್ಯವೇ ಇರುವುದಿಲ್ಲ. ಇದರಿಂದ ರಾಜ್ಯ ಸರ್ಕಾರಕ್ಕೂ ಆದಾಯ ವೃದ್ಧಿಯಾಗುತ್ತದೆ. ಹೀಗಾಗಿ ತೆರಿಗೆ ಇಳಿಸುವಂತೆ ವಾಹನ ಮಾಲೀಕರಿಂದ ಒತ್ತಾಯ ಕೇಳಿಬಂದಿದೆ.
ಯಾವ ರಾಜ್ಯದಲ್ಲಿ ಎಷ್ಟು ದರ?
* ನಾಗಾಲ್ಯಾಂಡ್‌ನಲ್ಲಿ 1 ಬಸ್ ನೋಂದಣಿಗೆ 3 ತಿಂಗಳಿಗೆ 18 ಸಾವಿರ ರೂ. ರಸ್ತೆ ತೆರಿಗೆ ಇದೆ
* ಕರ್ನಾಟಕದಲ್ಲಿ 3 ತಿಂಗಳಿಗೆ ಸಾಮಾನ್ಯ ಬಸ್ ಗೆ 82,360, ಲಕ್ಷುರಿಗೆ 1.20 ಲಕ್ಷ ರೂ. ಇದೆ
* ಗೋವಾದಲ್ಲಿ ಎಲ್ಲ ವಾಹನಗಳಿಗೆ ಆಸನ ಸಾಮರ್ಥ್ಯ ಸೇರಿ ತಿಂಗಳಿಗೆ 11 ಸಾವಿರ ರೂ.
* ಪುದುಚೇರಿಯಲ್ಲಿ 3 ತಿಂಗಳಿಗೆ ಪ್ರತಿ ಅಸನಕ್ಕೆ 450 ರೂ.ನಂತೆ ರಸ್ತೆ ತೆರಿಗೆ ಇದೆ.















