ಬೆಂಗಳೂರು : ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ ಅಳವಡಿಸುವ ಅವಧಿಯನ್ನು ಮೂರು ತಿಂಗಳು ವಿಸ್ತರಿಸಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ವಿಧಾನ್ ಪರಿಷತ್ನ ಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯ ಮಾದೇಗೌಡ ಅವರು ಮಾತನಾಡಿ “ರಾಜ್ಯದಲ್ಲಿ ಎರಡು ಕೋಟಿಗೂ ಹೆಚ್ಚಿನ ವಾಹನಗಳಿವೆ. ಹಳ್ಳಿ ಜನರು ವಾಹನಗಳಿಗೆ ಇನ್ನೂ ಹೆಚ್ ಎಸ್ ಆರ್ ಪಿ ನೇಮ್ ಪ್ಲೇಟ್ ಅಳವಡಿಸಬೇಕು. ಆನ್ ಲೈನ್ ನಲ್ಲಿ ನೊಂದಣಿ ಮಾಡಬೇಕಿರುವ ಹಿನ್ನೆಲೆಯಲ್ಲಿ ಫೇಕ್ ವೆಬ್ ಸೈಟ್ ಹಾವಳಿ ಹೆಚ್ಚಾಗಿದೆ ಇದರ ಬಗ್ಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳಬೇಕು. ಅಲ್ಲದೆ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಕೆಗೆ ಅವಧಿಯನ್ನು ಸರ್ಕಾರ ನೀಡಿರುವ ಗಡುವು ವಿಸ್ತರಿಸಬೇಕು” ಎಂದು ಹೇಳಿದರು.
ಇದಕ್ಕೆ ಉತ್ತರಿಸಿದ ಸಚಿವ ರಾಮಲಿಂಗಾರೆಡ್ಡಿ ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ಅಳವಡಿಸುವ ಗಡುವನ್ನು ಮೂರು ತಿಂಗಳು ವಿಸ್ತರಿಸಲಾಗುತ್ತದೆ. ಇನ್ನು ಫೇಕ್ ವೆಬ್ ಸೈಟ್ ಬಗ್ಗೆ ಎಚ್ಚರ ವಹಿಸಲಾಗುತ್ತದೆ. ಈ ಯೋಜನೆ ಪಾರದರ್ಶಕವಾಗಿದೆ ಎಂದು ಸದನಕ್ಕೆ ತಿಳಿಸಿದರು.
ಏನಿದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ?
ಈ HSRP ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತೆ.