ಬೆಂಗಳೂರು: ಡ್ರಂಕ್ ಅಂಡ್ ಡ್ರೈವ್ ಪರಿಶೀಲನೆ ನೆಪದಲ್ಲಿ ಯುತಿಯೊಬ್ಬರನ್ನು ರಸ್ತೆಯಲ್ಲಿ ಅಡ್ಡಗಟ್ಟಿ ಎಂಟು ಸಾವಿರ ರೂಪಾಯಿಯನ್ನು ವಸೂಲಿ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಜೀವನ್ ಬಿಮಾ ನಗರ ಸಂಚಾರ ಠಾಣೆಯ ನಾಲ್ವರು ಪೊಲೀಸರನ್ನು ನಗರ ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.
ಜೀವನ್ ಬಿಮಾ ನಗರ ಸಂಚಾರ ತಾಳೆಯ ಇನ್ಸ್ ಪೆಕ್ಟರ್ ವೆಂಕಟಾಚಲಪತಿ, ಕಾನ್ಸ್‌ಟೇಬಲ್ ಗಳಾದ ಹುಚ್ಚು ಸಾಬ್ ಕಡೆಮನಿ, ಗಿರೀಶ್, ಬಸಪ್ಪ ಅವರನ್ನು ಅಶಿಸ್ತು ಮತ್ತು ಕರ್ತವ್ಯ ಲೋಪ ಆರೋಪದಡಿ ಸೇವೆಯಿಂದ ಅಮಾನತು ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಆದೇಶ ಹೊರಡಿಸಿದ್ದಾರೆ.
ಆರೋಪವೇನು ?:
ಇದೇ ಕಳೆದ ಫೆಬ್ರವರಿ 23ರಂದು ರಾತ್ರಿ 11:00 ಸುಮಾರಿಗೆ ತನ್ನ ಮಗಳು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಹಳೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಪರಿಶೀಲನೆ ನೆಪದಲ್ಲಿ ಪೊಲೀಸರು ತಡೆದು ನಿಲ್ಲಿಸಿದರು. ತಪಾಸಣೆ ವೇಳೆ ಆಕೆ ಮದ್ಯ ಸೇವನೆ ಮಾಡಿಲ್ಲ ಎಂದರು ಕೇಳದೆ ನೀವು ಮದ್ಯಪಾನ ಮಾಡಿದ್ದೀರಿ ಎಂದು ಪೊಲೀಸರು ವಾದಿಸಿದರು. ಬಳಿಕ ಕೇಸ್ ದಾಖಲು ಮಾಡದಿರಲು 15,000 ಹಣ ನೀಡುವಂತೆ ಬೇಡಿಕೆ ಇಟ್ಟರು. ಹಣ ಪಡೆದುಕೊಳ್ಳಲು ಖಾಸಗಿ ವ್ಯಕ್ತಿ ಒಬ್ಬನನ್ನು ಕಾರಿನಲ್ಲಿ ಕಳುಹಿಸಿ ಎಟಿಎಂ ನಲ್ಲಿ ಹಣ ಡ್ರಾ ಮಾಡಿಕೊಳ್ಳಲು ಮುಂದಾದರು. ಎಟಿಎಂ ನಲ್ಲಿ ಹಣ ಬಾರದ ಕಾರಣ ಪೆಟ್ರೋಲ್ ಬಂಕ್ ಗೆ ಕರೆದೊಯ್ದು ಹಣ ಪಡೆಯಲು ಯತ್ನಿಸಿದರು. ಅದು ಸಾಧ್ಯವಾಗದೆ ಅಂತಿಮವಾಗಿ ಬೇರೊಬ್ಬ ಖಾಸಗಿ ವ್ಯಕ್ತಿಯ ಯುಪಿಐ ಖಾತೆಗೆ 8,000 ವರ್ಗಾಯಿಸಿಕೊಂಡರು ಎಂದು ಆರೋಪಿಸಿ ಯುವತಿಯ ತಂದೆ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಬರೆದು ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದರು.
ಜೀವನ್ ವಿಮಾನ ನಗರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳ ಸುಲಿಗೆ ಆರೋಪಕ್ಕೆ ಸಂಬಂಧಿಸಿದಂತೆ ಪೂರ್ವ ವಿಭಾಗದ ಡಿಸಿಪಿ ಕುಲದೀಪ್ ಕುಮಾರ್ ಜೈನ್ ತನಿಖೆ ನಡೆಸಿ ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ವರದಿಯಲ್ಲಿ ಪೊಲೀಸ್ ಸಿಬ್ಬಂದಿ ಯುವತಿಯಿಂದ ಖಾಸಗಿ ವ್ಯಕ್ತಿಯ ಯುಪಿಐ ಖಾತೆಗೆ ಹಣ ವರ್ಗಾವಣೆ ಮಾಡಿಕೊಂಡಿರುವುದು ದೃಢಪಟ್ಟಿತ್ತು. ವರದಿಯನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತರು ಇನ್ಸೆಕ್ಟರ್ ಸಹಿತ ನಾಲ್ವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ಅಮಾನತು ಮಾಡಿದ್ದಾರೆ.