ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನಲ್ಲಿ ಕಣ್ಮನ ತಣಿಸುವ ಪ್ರವಾಸಿ ಆಕರ್ಷಣೆಗಳಿವೆ. ಬೆಂಗಳೂರಿನಿಂದ 217 ಕಿ.ಮೀ ಮತ್ತು ಮಡಿಕೇರಿಯಿಂದ 52 ಕಿ.ಮೀ ದೂರದಲ್ಲಿ ಸೋಮವಾರಪೇಟೆ ಇದೆ. ಇಲ್ಲಿ ಬಿಳಿ ನೊರೆಯಿಂದ ಧರೆಗೆ ಇಳಿಯುವ ಜಲಪಾತಗಳ ನೋಟವನ್ನು ನೋಡುವುದೇ ಸೋಜಿಗ.
ಎತ್ತರದವಾದ ಪರ್ವತ ಶ್ರೇಣಿಗಳು ಪ್ರಕೃತಿ ಪ್ರೇಮಿಗಳನ್ನು ಕೈಬೀಸಿ ಕರೆಯುತ್ತದೆ. ಜೊತೆಗೆ ಪಾರಂಪರಿಕ ಸ್ಥಳಗಳು, ದೇವಾಲಯಗಳು ಇಲ್ಲಿವೆ. ವಾರಾಂತ್ಯ ಸಮಯದಲ್ಲಿ ಸ್ನೇಹಿತರೊಂದಿಗೆ ಸೋಮವಾರಪೇಟೆಯ ಪ್ರವಾಸ ಮಾಡುವುದು ಮರೆಯದಿರಿ.
ಗೋಲ್ಡನ್ ಟೆಂಪಲ್
ಗೋಲ್ಡನ್ ಟೆಂಪಲ್ ಎಂದೇ ಜನಪ್ರಿಯವಾಗಿರುವ ನಾಮ್ಡ್ರೋಲಿಂಗ್ ಮಠವು ಸೋಮವಾರಪೇಟೆಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿದೆ. ಈ ಮಠವು ಟಿಬೆಟಿಯನ್ ಬೌದ್ಧಧರ್ಮ ಕೇಂದ್ರವಾಗಿದೆ. ಸುಮಾರು 80 ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ಈ ಮಠವು ನಿಸರ್ಗಧಾಮದಿಂದ ಸುಮಾರು 60 ಕಿ.ಮೀ ದೂರದಲ್ಲಿದೆ.
ಕೂರ್ಗ್ಗೆ ಭೇಟಿ ನೀಡುವ ಬಹುತೇಕರು ಈ ಗೋಲ್ಡನ್ ಟೆಂಪಲ್ಗೆ ಹೋಗುವುದನ್ನು ತಪ್ಪಿಸುವುದಿಲ್ಲ.
ನಾಗರಹೊಳೆ ನ್ಯಾಷನಲ್ ಪಾರ್ಕ್
ಸೋಮವಾರಪೇಟೆಯಿಂದ ನಾಗರಹೊಳೆ ನ್ಯಾಷನಲ್ ಪಾರ್ಕ್ 104 ಕಿ.ಮೀ ದೂರದಲ್ಲಿದೆ. ಯುನೆಸ್ಕೋ ವಿಶ್ವ ಪರಂಪರೆಯ ತಾಣವಾಗಿರುವ ಈ ರಾಷ್ಟ್ರೀಯ ಉದ್ಯಾನವು ಅನೇಕ ವನ್ಯಜೀವಿಗಳ ವಾಸಸ್ಥಾನವಾಗಿದೆ. ಇದನ್ನು ‘ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ’ ಎಂದೂ ಸಹ ಕರೆಯುತ್ತಾರೆ. ಇದು ದೇಶದ ಪ್ರಮುಖ ಹುಲಿ ಸಂರಕ್ಷಿತ ಪ್ರದೇಶವು ಹೌದು.
ಇಲ್ಲಿ ಕಾಡೆಮ್ಮೆ, ಕರಡಿಗಳು, ಕಾಡು ಹಂದಿ, ಜಿಂಕೆ, ಕೃಷ್ಣ ಮೃಗ, ಚುಕ್ಕೆ ಜಿಂಕೆಗಳು ಸೇರಿದಂತೆ ಇನ್ನು ಅನೇಕ ವನ್ಯಜೀವಿಗಳಿವೆ. ನಾಗರಹೊಳೆ ಅರಣ್ಯದಲ್ಲಿ ಸ್ನೇಹಿತರೊಂದಿಗೆ ರೋಮಾಂಚಕ ಸಫಾರಿ ಕೂಡ ಮಾಡಬಹುದು.
ದುಬಾರೆ ಎಲಿಫೆಂಟ್ ಕ್ಯಾಂಪ್
ದುಬಾರೆ ಎಲಿಫೆಂಟ್ ಕ್ಯಾಂಪ್ ಕೊಡಗು ಜಿಲ್ಲೆಯ ಕಾವೇರಿ ನದಿಯ ದಡದಲ್ಲಿರುವ ಆನೆ ಶಿಬಿರವಾಗಿದೆ. ಪ್ರಶಾಂತವಾಗಿ ಹರಿಯುತ್ತಿರುವ ನದಿಯಲ್ಲಿ ಪ್ರವಾಸಿಗರು ಮಿಂದೇಳಲು ಬಯಸುತ್ತಾರೆ. ಅಷ್ಟೇ ಅಲ್ಲ, ಸಾಹಸ ಚಟುವಟಿಕೆಗಳನ್ನು ಅಂತ್ಯವಿಲ್ಲದೆ ಇಲ್ಲಿ ಎಂಜಾಯ್ ಮಾಡಬಹುದು. ಮುಖ್ಯವಾಗಿ ಮೀನುಗಾರಿಕೆ, ರಿವರ್ ರಾಫ್ಟಿಂಗ್, ಆನೆ ಸವಾರಿಗಳಲ್ಲಿ ತೊಡಗಿಸಿಕೊಳ್ಳಬಹುದು.
ಆನೆಗಳು ಸ್ನಾನ ಮಾಡುವ ಅಪರೂಪದ ದೃಶ್ಯಗಳನ್ನು ನೀವು ಇಲ್ಲಿ ಕಣ್ತುಂಬಿಕೊಳ್ಳಬಹುದು. ಆನೆ ಸವಾರಿ ಇಲ್ಲಿನ ಪ್ರಮುಖ ಚಟುವಟಿಕೆಗಳಲ್ಲಿ ಒಂದಾಗಿದೆ.
ಕೋಟೆ ಬೆಟ್ಟ ಟ್ರೆಕ್ಕಿಂಗ್
ಪ್ರಕೃತಿಯಿಂದ ಆಶೀರ್ವದಿಸಲ್ಪಟ್ಟಿರುವ ಕೊಡಗಿನ ಸೋಮವಾರ ಪೇಟೆಯಲ್ಲಿ ಕೋಟೆ ಬೆಟ್ಟ ಎಂಬ ಆಹ್ಲಾದಕರವಾದ ತಾಣವಿದೆ. ನೀವು ಸಾಹಸಿಗಳಾಗಿದ್ದರೆ ಇಲ್ಲಿಗೆ ಪ್ರಕೃತಿ ಚಾರಣವನ್ನು ಕೈಗೊಳ್ಳಬಹುದು. ಬ್ರಹ್ಮಗಿರಿ ಮತ್ತು ತಡಿಯಂಡಮೋಳ್ ಶಿಖರಗಳ ನಂತರ ಈ ಕೋಟೆ ಬೆಟ್ಟವು ಎತ್ತರದಲ್ಲಿ ಮೂರನೇ ಸ್ಥಾನ ಗಿಟ್ಟಿಸಿಕೊಂಡಿದೆ.
ದಂತಕಥೆಯ ಪ್ರಕಾರ, ಮಹಾಭಾರತದ ಪಾಂಡವರು ತಮ್ಮ ವನವಾಸದ ಸಮಯದಲ್ಲಿ ಈ ಸ್ಥಳದಲ್ಲಿ ಕೆಲವು ದಿನಗಳು ಉಳಿದಿದ್ದರು ಎನ್ನಲಾಗುತ್ತದೆ. ಇದಕ್ಕೆ ಪುಷ್ಠಿ ನೀಡುವಂತೆ ಇಲ್ಲಿ ಅನೇಕ ಹಳೆಯ ಕಲ್ಲಿನ ಮನೆಗಳನ್ನು ಕಾಣಬಹುದು. ಬೆಟ್ಟದ ಮೇಲೆ ಪರಮಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿರುವ ಆಲಯವು ಇದೆ.
ಮಲ್ಲಳ್ಳಿ ಜಲಪಾತ
ಸೋಮವಾರಪೇಟೆಯಿಂದ ಕೇವಲ 25 ಕಿ.ಮೀ ದೂರದಲ್ಲಿರುವ ಮಲ್ಲಳ್ಳಿ ಜಲಪಾತವು ಅತ್ಯಂತ ಸುಂದರವಾದ ಜಲಪಾತಗಳಲ್ಲಿ ಒಂದಾಗಿದೆ. ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಲು ಹಾತೊರೆಯುತ್ತಾರೆ. ಇದನ್ನು ಹೊರತು ಪಡಿಸಿ ಪುಷ್ಪಗಿರಿ ತಪ್ಪಲಿನಲ್ಲಿ ಅನೇಕ ತೊರೆಗಳು, ಮಂಜು ಜಲಪಾತಗಳಿವೆ.
ಮಕ್ಕಳಗುಡಿ ಬೆಟ್ಟ, ರಾಜಾ ಸೀಟ್, ಹಾರಂಗಿ ಅಣೆಕಟ್ಟು, ಬೀಳೂರು ಗಾಲ್ಫ್ ಕೋರ್ಸ್ ಸೋಮವಾರಪೇಟೆಯ ಪ್ರಮುಖ ಆಕರ್ಷಣೆಗಳಾಗಿವೆ.