ಮನೆ ಕಾನೂನು ಫೇಸ್‌ ಬುಕ್‌, ಟ್ವಿಟರ್‌, ಮಾಧ್ಯಮ ಚರ್ಚೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ: ಎನ್‌ ಎಚ್‌ ಆರ್‌ ಸಿ...

ಫೇಸ್‌ ಬುಕ್‌, ಟ್ವಿಟರ್‌, ಮಾಧ್ಯಮ ಚರ್ಚೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ: ಎನ್‌ ಎಚ್‌ ಆರ್‌ ಸಿ ಮುಖ್ಯಸ್ಥ ಅರುಣ್‌ ಮಿಶ್ರಾ

0

ಫೇಸ್‌ ಬುಕ್‌, ಟ್ವಿಟರ್‌ ಮತ್ತು ಮಾಧ್ಯಮ ಚರ್ಚೆಗಳು ಬಹುತೇಕ ಬಾರಿ ವ್ಯಕ್ತಿಯ ಘನತೆಗೆ ಧಕ್ಕೆ ಉಂಟು ಮಾಡುವ ಮೂಲಕ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತಿವೆ ಎಂದು ಗುರುವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ ಎಚ್‌ ಆರ್‌ ಸಿ) ಮುಖ್ಯಸ್ಥ ಮತ್ತು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಕಳವಳ ವ್ಯಕ್ತಪಡಿಸಿದರು.

ಮಾಧ್ಯಮ ಚರ್ಚೆಯ ಗುಣಮಟ್ಟ ಕುಸಿತವು ಆತಂಕಕಾರಿಯಾಗಿದೆ. ಈ ವೇದಿಕೆಗಳಲ್ಲಿನ ಚರ್ಚೆಗಳು ಯುವ ತಲೆಮಾರಿನ ಮೇಲೆ ಬೀರುವ ಪ್ರಭಾವವು ಆರೋಗ್ಯಕರ ಚರ್ಚೆ, ಸಂವಾದಕ್ಕೆ ನಾಂದಿ ಹಾಡುತ್ತದೆ ಎಂಬುದನ್ನು ಖಾತರಿಪಡಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ನ್ಯಾ. ಮಿಶ್ರಾ ಹೇಳಿದ್ದಾರೆ.

ಕಳೆದ ತಿಂಗಳು ತೃತೀಯ ಲಿಂಗಿಗಳ ಕಲ್ಯಾಣಕ್ಕೆ ಆಯೋಗವು ಸಲಹಾ ಕ್ರಮಗಳನ್ನು ಬಿಡುಗಡೆ ಮಾಡಿದೆ. ಪಿಂಚಣಿ ಮತ್ತು ಇತರೆ ಅನುಕೂಲ ಪಡೆಯಲು ತೃತೀಯ ಲಿಂಗಿ ಮಕ್ಕಳನ್ನು ಹೆಣ್ಣು ಮಕ್ಕಳಿಗೆ ಸಮಾನವಾಗಿ ಕಾಣಬೇಕು. ಕೃಷಿ ಭೂಮಿ ಪಡೆಯಲು ಅನುಮತಿಸಬೇಕು. ಶಿಕ್ಷಣ ಮತ್ತು ಉದ್ಯೋಗದಲ್ಲಿ ರಕ್ಷಣೆ ಒದಗಿಸಬೇಕು ಎಂದು ಸಲಹೆಗಳನ್ನು ನೀಡಲಾಗಿರುವ ಬಗ್ಗೆ ಅವರು ವಿವರಿಸಿದರು.

ಭಿಕ್ಷುಕರು, ತೃತೀಯ ಲಿಂಗಿಗಳು, ಲೈಂಗಿಕ ಕಾರ್ಯಕರ್ತೆಯರು, ಅನಾಥರು ಮತ್ತು ಕಳ್ಳಸಾಗಣೆಗೆ ಒಳಗಾದ ಅಪ್ರಾಪ್ತರ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಇವರುಗಳು ಹತ್ತು ಹಲವು ಕಲ್ಯಾಣ ಕಾರ್ಯಕ್ರಮಗಳ ಲಾಭ ಪಡೆಯಲು ಅಗತ್ಯವಾದ ಸರ್ಕಾರಿ ದಾಖಲೆಗಳನ್ನು ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಅವರು ವಿವರಿಸಿದರು.

ದೆಹಲಿಯ ಎನ್‌ ಎಚ್‌ ಆರ್‌ ಸಿ ಸಂಸ್ಥಾಪನಾ ದಿನದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾ. ಮಿಶ್ರಾ ಮಾತನಾಡಿದರು. ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಸುಪ್ರೀಂ ಕೋರ್ಟ್‌, ದೆಹಲಿ ಹೈಕೋರ್ಟ್‌ ನ್ಯಾಯಮೂರ್ತಿಗಳು, ಎನ್‌ಎಚ್‌ಆರ್‌ಸಿ ಪ್ರಮುಖರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಹಿಂದಿನ ಲೇಖನಟೆಸ್ಟಿಕ್ಯೂಲಾರ್ ಟಾರ್ಷನ್
ಮುಂದಿನ ಲೇಖನರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ  ಅಭಿಷೇಕ್‌ ಅಂಬರೀಶ್‌ ಹೊಸ ಚಿತ್ರ