ಮುಂಬೈ (Mumbai): ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಉದ್ಧವ್ ಠಾಕ್ರೆ ಅವರು ರಾಜೀನಾಮೆ ನೀಡಿದ ನಂತರ ಬಿಜೆಪಿ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ.
ಠಾಕ್ರೆ ಅವರ ರಾಜೀನಾಮೆಯ ನಂತರ ಎಂವಿಎ ಸರ್ಕಾರ ಪತನಗೊಂಡಿದ್ದು, ಹಲವು ಬಿಜೆಪಿ ಶಾಸಕರು ಮತ್ತು ಹಿರಿಯ ನಾಯಕರು ಮುಂಬೈನ ಫಡ್ನವಿಸ್ ಅವರ ನಿವಾಸದಲ್ಲಿ ಜಮಾಯಿಸಿ ಪರಸ್ಪರ ಅಭಿನಂದಿಸಿಕೊಂಡಿದ್ದಾರೆ.
ಈ ವೇಳೆ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿರುವುದರಿಂದ ಬಿಜೆಪಿಯ ಮುಂದಿನ ನಡೆ ಏನು ಎಂಬ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್, ರಾಜ್ಯ ಬಿಜೆಪಿ ಘಟಕವು ತನ್ನ ಎಲ್ಲಾ ಶಾಸಕರನ್ನು ಮುಂಬೈಗೆ ಆಗಮಿಸುವಂತೆ ಸೂಚಿಸಿದೆ. ಸರ್ಕಾರ ರಚಿಸುವ ಮುಂದಿನ ಕ್ರಮಗಳ ಬಗ್ಗೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್ ಮತ್ತು ಬಂಡಾಯ ಶಿವಸೇನೆ ನಾಯಕ ಏಕನಾಥ್ ಶಿಂಧೆ ಅವರು ನಿರ್ಧರಿಸಲಿದ್ದಾರೆ ಎಂದಿದ್ದಾರೆ. ಜೊತೆಗೆ ಗೆಲುವಿನಲ್ಲಿ ಬಿಜೆಪಿ ಕಾರ್ಯಕರ್ತರು ಸಂಯಮ ಪಾಲಿಸಬೇಕು ಎಂದು ಹೇಳಿದ್ದಾರೆ.
ಇನ್ನು ಪಕ್ಷದ ನಿಲುವನ್ನು ನಾಳೆ ಖಚಿತವಾಗಿ ಹೇಳುತ್ತೇನೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವೀಸ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.