ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 1 ಮತ್ತು ಕೆಲವು ವಿಮಾನಗಳಲ್ಲಿ ಬಾಂಬ್ ಇರಿಸಲಾಗಿದೆ ಎಂದು ಹುಸಿ ಬಾಂಬ್ ಬೆದರಿಕೆ ಬಂದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಬಾಂಬ್ ಬೆದರಿಕೆ ಕಳಸಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಮ್ಯಾನೇಜರ್ ದೂರು ದಾಖಲಿಸಿದ್ದಾರೆ.
ಅಪರಿಚಿತ ಆರೋಪಿ ವಿರುದ್ಧ ಮೇ 2 ರಂದು ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಟರ್ಮಿನಲ್ 1r ಮ್ಯಾನೇಜರ್ ಗೀತಾ ರಾಣಿ ಅವರು ಮೇ 2 ರಂದು ದೂರು ದಾಖಲಿಸಿದ್ದು. ಏಪ್ರಿಲ್ 29 ರಂದು ಬೆಳಿಗ್ಗೆ ವಿಮಾನ ನಿಲ್ದಾಣದ ಮೇಲ್ ಐಡಿಗೆ, 209.85.218.54 ಐಪಿ ವಿಳಾಸದೊಂದಿಗೆ 666darktriad666@gmail.com ಇಮೇಲ್ ವಿಳಾಸದಿಂದ ‘Terrorzers111’ ಗುಂಪಿನಿಂದ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
“ವಿಮಾನದಲ್ಲಿ ಟೈಂ ಬಾಂಬ್ ಇಡಲಾಗಿದೆ. ಯಾವುದೇ ಸಮಯದಲ್ಲಿ ಸ್ಫೋಟಗೊಳ್ಳಬಹುದು. ಜೊತೆಗೆ, ಗುಂಪಿನಿಂದ ಟರ್ಮಿನಲ್ 1 ರ ಒಳಗೆ ವಿವಿಧ ಸ್ಥಳಗಳಲ್ಲಿ ಸ್ಫೋಟಕ ವಸ್ತುಗಳನ್ನು ಇರಿಸಲಾಗಿದೆ” ಅಂತ ಮೇಲ್ ಬಂದಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ತಿಳಿಸಿದರು.
ವಿಮಾನ ನಿಲ್ದಾಣ ಸಿಬ್ಬಂದಿಯ ದೂರಿನ ಆಧಾರದ ಮೇಲೆ, ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ IPC ಸೆಕ್ಷನ್ ಗಳು 501 (1) (ಬಿ), ಸೆಕ್ಷನ್ 507 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೂ ಅದೇ ದಿನ (ಏಪ್ರಿಲ್ 29) ಬಾಂಬ್ ಬೆದರಿಕೆ ಮೇಲ್ ಬಂದಿತ್ತು. ಅಲ್ಲದೆ ದೇಶದ ಇತರ ಕೆಲವು ಖಾಸಗಿ ವಿಮಾನ ನಿಲ್ದಾಣಗಳಿಗೂ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿತ್ತು. ದೆಹಲಿ ಮತ್ತು ಎನ್ ಸಿಆರ್ ನ ಶಾಲೆಗಳಿಗೆ ಮೇ 1 ರಂದು ಇದೇ ರೀತಿಯ ಬೆದರಿಕೆಗಳು ಬಂದಿದ್ದರೇ, ಅಹಮದಾಬಾದ್ ನ ಶಾಲೆಗಳಿಗೆ ಸೋಮವಾರ (ಮೇ 6) ಬೆದರಿಕೆ ಸಂದೇಶ ಬಂದಿತ್ತು.