ಮೈಸೂರು: ನಕಲಿ ಮರಣ ಪ್ರಮಾಣ ಪತ್ರ ಹಾಗೂ ವಂಶವೃಕ್ಷ ಸೃಷ್ಟಿಸಿ ಬೇನಾಮಿ ವ್ಯಕ್ತಿಗಳಿಗೆ ಪೌತಿಖಾತೆ ಮಾಡಿ ಕೊಟ್ಟ ಆರೋಪ ಹಿನ್ನೆಲೆ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಅವರು ಆದೇಶ ಹೊರಡಿಸಿದ್ದಾರೆ.
ಐವರು ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಕೈಗೊಳ್ಳುವಂತೆ ಟಿ.ನರಸೀಪುರ ತಹಶೀಲ್ದಾರ್ ಗೀತಾ, ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್ ಅವರು ಶಿಫಾರಸ್ಸು ಮಾಡಿದ್ದರು. ಇದರ ಅನ್ವಯ ಮೂವರು ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಟಿ.ನರಸೀಪುರ ತಾಲೂಕು ಕಚೇರಿ ಹಿಂದಿನ ರಾಜಸ್ವ ನಿರೀಕ್ಷಕ ಹಾಲಿ ಆಹಾರ ನಿರೀಕ್ಷಕ ದೇವಣ್ಣ.ಕೆ, ಟಿ.ನರಸೀಪುರ ಭೈರಾಪುರ ಹಿಂದಿನ ಗ್ರಾಮ ಆಡಳಿತ ಅಧಿಕಾರಿ ಹಾಲಿ ಜಯಪುರ ವೃತ್ತ ಗ್ರಾಮ ಆಡಳಿತಾಧಿಕಾರಿ ಪ್ರದೀಪ್ ಸಿಂಗ್, ಟಿ.ನರಸೀಪುರ ತಾಲೂಕು ಕಚೇರಿ ಗ್ರಾಮ ಆಡಳಿತ ಅಧಿಕಾರಿ ಭೂಮಿಕೇಂದ್ರದ ಹಂಸಲೇಖ ಸೇರಿ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ.
ತಿರುಮಕೂಡಲು ಗ್ರಾಮದ ಸರ್ವೆ ನಂ.55/2 ರಲ್ಲಿ 22 ಗುಂಟೆ ಹಾಗೂ 55/6 ರಲ್ಲಿನ 8 ಗುಂಟೆ ಜಮೀನಿಗೆ ಅಕ್ರಮವಾಗಿ ಪೌತಿಖಾತೆ ಮಾಡಿಸಿದ್ದಾರೆ. ಕರ್ತವ್ಯಲೋಪ ಮೇಲ್ನೋಟಕ್ಕೆ ಕಂಡುಬಂದಿರುವ ಹಿನ್ನೆಲೆ ಜಿಲ್ಲಾಧಿಕಾರಿ, ಇಲಾಖಾ ವಿಚಾರಣೆ ಕಾಯ್ದಿರಿಸಿದ್ದಾರೆ. ತಕ್ಷಣ ಜಾರಿಗೆ ಬರುವಂತೆ ಅಮಾನತ್ತಿನಲ್ಲಿಡುವಂತೆ ಆದೇಶಿಸಿದ್ದಾರೆ.