ಮನೆ ಅಪರಾಧ ಮೈಸೂರಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ವಿತರಣೆ ಜಾಲ ಪತ್ತೆ: ದೂರುದಾರರಿಗೆ ನೋಟಿಸ್ ಕೊಟ್ಟ ಪಿಎಸ್’ಐ

ಮೈಸೂರಲ್ಲಿ ನಕಲಿ ಡ್ರೈವಿಂಗ್ ಲೈಸೆನ್ಸ್ ವಿತರಣೆ ಜಾಲ ಪತ್ತೆ: ದೂರುದಾರರಿಗೆ ನೋಟಿಸ್ ಕೊಟ್ಟ ಪಿಎಸ್’ಐ

0

ಬೆಂಗಳೂರು(Bengaluru): ಹಣ ಪಡೆದು ನಕಲಿ ಡ್ರೈವಿಂಗ್ ಸ್ಕೂಲ್ (ಡಿಎಲ್)  ವಿತರಿಸುತ್ತಿದ್ದ ಜಾಲ ಪತ್ತೆಯಾಗಿದ್ದು, 30 ಸಾವಿರ ರೂ. ಗೆ ನಕಲಿ ಡ್ರೈವಿಂಗ್ ಲೈಸೆನ್ಸ್ ಬಿಕರಿಯಾಗುತ್ತಿವೆ.

ಈ ದಂಧೆಯಲ್ಲಿ ಖಾಸಗಿ ಡ್ರೈವಿಂಗ್ ಸ್ಕೂಲ್’ನೊಂದಿಗೆ ಪ್ರಾದೇಶಿಕ ಸಾರಿಗೆ ಕಚೇರಿ (ಆರ್’ಟಿಓ) ಅಧಿಕಾರಿಗಳು ಹಾಗೂ ಸಿಬ್ಬಂದಿ ಕೈಜೋಡಿಸಿರುವ ಕುರಿತು ಅನುಮಾನ ವ್ಯಕ್ತವಾಗಿದ್ದು, ಈ ಕುರಿತು ಮೈಸೂರಿನ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೈಸೂರು ನಗರದ ವೀಣಾ ಡ್ರೈವಿಂಗ್ ಸ್ಕೂಲ್’ನ ಬಾಬು, ವೀಣಾ ಮತ್ತು ಮೈಸೂರು ಪಶ್ಚಿಮ ಆರ್’ಟಿಓ ಹಾಗೂ ಹಾಗೂ ಸಿಬ್ಬಂದಿ ವಿರುದ್ಧ 2022ರ ನ.29ರಂದು ಎಫ್’ಐಆರ್ ದಾಖಲಾಗಿದೆ.

ಆದರೆ ಎಫ್’ಐಆರ್ ದಾಖಲಾಗಿ 37 ದಿನ  ಕಳೆದರೂ ಆರೋಪಿಗಳನ್ನು ಬಂಧಿಸದ ತನಿಖಾಧಿಕಾರಿ, ಆರ್’ಟಿಓ ಅಧಿಕಾರಿಗಳ ಅಕ್ರಮಕ್ಕೆ ಸಾಕ್ಷ್ಯ ಒದಗಿಸಿದ ದೂರುದಾರರಿಗೆ ನೋಟಿಸ್ ಜಾರಿಗೊಳಿಸಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋದ ಆರೋಪಿಗಳು

ವಕೀಲರಾದ ಕೆ.ಆರ್.ರಾಜಕುಮಾರ್ ಎಂಬುವರು ನೀಡಿರುವ ದೂರಿನ ಮೇರೆಗೆ ಪೊಲೀಸರು ಎಫ್’ಐಆರ್ ದಾಖಲಿಸಿದ್ದಾರೆ. ಆದರೆ ಆರ್’ಟಿಓ ಅಧಿಕಾರಿ ಬಾಬು ಮತ್ತು ವೀಣಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಮೈಸೂರಿನ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ. ಹೀಗಾಗಿ ಎಲ್ಲಾ ಆರೋಪಿಗಳು ಹೈಕೋರ್ಟ್’ಗೆ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಸಲ್ಲಿಸಿದ್ದಾರೆ.

ಈವರೆಗೆ ನೂರಾರು ನಕಲಿ ಕಾರ್ಡ್’ಗಳನ್ನು ಮಾಡಿಕೊಟ್ಟಿರುವ ಅನುಮಾನ ವ್ಯಕ್ತವಾಗಿದೆ. ನಾಲ್ವರಿಗೆ ವಿತರಿಸಿರುವ ನಕಲಿ ಕಾರ್ಡ್’ಗಳನ್ನು ಸಾಕ್ಷ್ಯ ರೂಪದಲ್ಲಿ ದೂರುದಾರರು ಒದಗಿಸಿದ್ದಾರೆ. ಆ ಕಾರ್ಡ್’ಗಳಲ್ಲಿರುವ ಫೋಟೋ, ವಿಳಾಸ ಸೇರಿ ಇನ್ನಿತರ ವಿವರಗಳು ಸುಳ್ಳು ಎನ್ನಲಾಗಿದೆ.

ರಾಜ್ಯದ ಎಲ್ಲಾ ಆರ್’ಟಿಓ ಕಚೇರಿಗಳಿಗೆ ಡಿಎಲ್ ವಿತರಿಸುವ ಜವಬ್ದಾರಿಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಬೆಂಗಳೂರಿನಲ್ಲಿರುವ ಆ ಸಂಸ್ಥೆ ಪ್ರತಿ ಕಛೇರಿಗೆ ಇಂತಿಷ್ಟು ಕಾರ್ಡ್’ಗಳನ್ನು ಪೂರೈಸುತ್ತದೆ. ಆ ಕಾರ್ಡ್’ಗಳನ್ನು ಪಡೆದು ಫೋಟೋ ಅಂಟಿಸಿ, ಅದಕ್ಕೆ ನಕಲಿ ಸಹಿ ಮಾಡಿ ವಿತರಣೆ ಮಾಡಲಾಗಿದೆ. ಕಾರ್ಡ್ ಅಸಲಿಯಾದರೂ ಅದರಲ್ಲಿ ಫೋಟೋ ಮತ್ತು ಸಹಿ ನಕಲಿಯಾಗಿದೆ. ಇಲಾಖೆಗೆ ಸೇರಿದ ಅಸಲಿ ಕಾರ್ಡ್ ಆಗಿದ್ದರಿಂದ ನಕಲಿ ಡಿಎಲ್ ಎಂಬುದು ಯಾರಿಗೂ ಅನುಮಾನ ಬರುವುದಿಲ್ಲ. ತಲಾ ಕಾರ್ಡ್’ಗೆ 30 ಸಾವಿರ ರೂ.ವರೆಗೆ ವಸೂಲಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ.

ಕೇರಳ ಸೇರಿ ಹೊರ ರಾಜ್ಯದವರಿಗೆ ನಕಲಿ ಕಾರ್ಡ್’ಗಳನ್ನು ಮಾಡಿಕೊಡಲಾಗಿದೆ. ಹಣ ಕೊಟ್ಟರೆ ಆ ವ್ಯಕ್ತಿಯ ಫೋಟೋ ಪಡೆದು ಅದನ್ನು ಕಾರ್ಡ್ ಮೇಲೆ ಅಂಟಿಸಿ, ಆರ್’ಟಿಒ ಹಾಗೂ ಗ್ರಾಹಕನ ಡಿಜಿಟಲ್ ಸಹಿ ನಕಲಿ ಮಾಡಲಾಗುತ್ತದೆ. ಕಲವೇ ದಿನಗಳಲ್ಲಿ ಡಿಎಲ್ ಹಣ ಕೊಟ್ಟವರ ಕೈಗೆ ತಲುಪುತ್ತದೆ.

ಕಾರ್ಡ್’ನಲ್ಲಿರುವ ಯಾವುದೇ ವಿವರಗಳು ಅಸಲಿಯಾಗಿರುವುದಿಲ್ಲ. ಆರ್’ಟಿಓ ಅಧಿಕಾರಿಗಳ ಸಹಕಾರವಿಲ್ಲದೇ ದಂಧೆ ನಡೆಸಲು ಸಾಧ್ಯವಿಲ್ಲ.

ಆದರೆ ಪ್ರಕರಣದ ತನಿಖೆ ನಡೆಸಬೇಕಾದ ಪೊಲೀಸರು, ಸಾಕ್ಷ್ಯ ನೀಡಿದ ದೂರುದಾರರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ನಕಲಿ ಕಾರ್ಡ್’ಗಳನ್ನು ಯಾರು, ಯಾವಾಗ, ಎಲ್ಲಿ ನೀಡಿದರು. ಆಗ ನಿಮ್ಮ ಜೊತೆ ಯಾರಿದ್ದರು ಎಂದು ಕೇಳಿದ್ದಾರೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಿಂದಿನ ಲೇಖನಉತ್ತರಾಧಿಕಾರ, ಜೀವನಾಂಶ, ವಿಚ್ಛೇದನ ಕುರಿತಾದ ಏಕರೂಪ ಕಾನೂನು ಜಾರಿ ಶಾಸಕಾಂಗ ವ್ಯಾಪ್ತಿಗೆ: ಸುಪ್ರೀಂಗೆ ಕೇಂದ್ರ ಸರ್ಕಾರ
ಮುಂದಿನ ಲೇಖನನಾಟಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಅವಹೇಳನ: ರಂಗಾಯಣದಲ್ಲಿ ಜ.10 ರಂದು ಬೃಹತ್ ಪ್ರತಿಭಟನೆ