ಮನೆ ಅಪರಾಧ ನಕಲಿ ವೋಟರ್ ಐಡಿ ಸೃಷ್ಟಿ ಪ್ರಕರಣ: ಮೂವರ ಬಂಧನ

ನಕಲಿ ವೋಟರ್ ಐಡಿ ಸೃಷ್ಟಿ ಪ್ರಕರಣ: ಮೂವರ ಬಂಧನ

0

ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರದಲ್ಲಿ ನಕಲಿ ಆಧಾರ್‌ ಕಾರ್ಡ್‌ ಹಾಗೂ ವೋಟರ್‌ ಐಡಿ ಸೃಷ್ಟಿ ಪ್ರಕರಣದಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಸಚಿವರೊಬ್ಬರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾದ ಮೌನೇಶ್‌ ಕುಮಾರ್‌, ಭರತ್‌, ರಾಘವೇಂದ್ರ ಬಂಧಿತರು.

ಆರೋಪಿಗಳ ಬಳಿಯಿದ್ದ 53 ನಕಲಿ ವೋಟರ್‌ ಐಡಿ ಜಪ್ತಿ ಮಾಡಲಾಗಿದೆ. ಆರೋಪಿಗಳು ಹೆಬ್ಟಾಳ ವ್ಯಾಪ್ತಿಯಲ್ಲಿ ಎಂಎಸ್‌ ಎಲ್‌ ಟೆಕ್ನೋ ಸರ್ವಿಸ್‌ ಹೆಸರಿನಲ್ಲಿ ಸೈಬರ್‌ ಸೆಂಟರ್‌ ನಡೆಸುತ್ತಿದ್ದರು. ಈ ಹಿಂದೆ ವಿದ್ಯಾರಣ್ಯಪುರದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಬಾಂಗ್ಲಾ ಯುವತಿಯರಿಗೆ ನಕಲಿ ಆಧಾರ್‌ ಕಾರ್ಡ್‌ ಮಾಡಿಕೊಟ್ಟಿರುವ ಆರೋಪ ಕೇಳಿ ಬಂದಿತ್ತು. ಇದರ ಬೆನ್ನಲ್ಲೇ ಸಿಸಿಬಿ ಪೊಲೀಸರು ಎಂಎಸ್‌ ಎಲ್‌ ಟೆಕ್ನೋ ಸರ್ವಿಸ್‌ ಮೇಲೆ ದಾಳಿ ನಡೆಸಿದ್ದರು.

ಕಳೆದ ವಾರ ಹೆಬ್ಟಾಳ ಪೊಲೀಸರು ಮೌನೇಶ್‌ ನನ್ನು ಬಂಧಿಸಿ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ನಾಯಕರ ನಿಯೋಗವು ಈ ಪ್ರಕರಣವನ್ನು ಸಿಬಿಐ ಮತ್ತು ಎನ್‌ ಐಎಗೆ ವಹಿಸುವಂತೆ ಒತ್ತಾಯಿಸಿ ಚುನಾವಣಾ ಆಯೋಗಕ್ಕೆ ಈ ದೂರು ನೀಡಿದೆ.

ಇದಾದ ಬಳಿಕ ಹೆಬ್ಬಾಳ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಆಧಾರ್‌ ಇಲಾಖೆಗೆ ಪತ್ರ ಬರೆದು ಎಂಎಸ್‌ಎಲ್‌ ಟೆಕ್ನೋ ಸರ್ವಿಸ್‌ ಮಾಡಿರುವ ಗುರುತಿನ ಚೀಟಿಗಳ ಮಾಹಿತಿ ಒದಗಿಸುವಂತೆ ಪೊಲೀಸರು ಕೇಳಿಕೊಂಡಿದ್ದಾರೆ. ಜತೆಗೆ ಹೆಬ್ಟಾಳ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಬೈರತಿ ಸುರೇಶ್‌ ಶಾಸಕತ್ವ ಅನರ್ಹತೆಗೆ ಕೋರಿ ಬಿಜೆಪಿ ನಿಯೋಗದಿಂದ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗಿತು.

ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದು ಹೇಗೆ?: ನಕಲಿ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಪಾನ್‌ ಕಾರ್ಡ್‌ ಮಾಡಿಕೊಡುತ್ತಿದ್ದ ಆರೋಪದ ಮೇಲೆ ಇತ್ತೀಚೆಗೆ ಸಿಸಿಬಿ ಪೊಲೀಸರು ಸುಲ್ತಾನ್‌ಪಾಳ್ಯ ಮುಖ್ಯರಸ್ತೆ ಕನಕನಗರದಲ್ಲಿರುವ ಎಂ.ಎಸ್‌.ಎಲ್‌ ಟೆಕ್ನೋ ಸಲೂಷನ್ಸ್‌ ಮೇಲೆ ದಾಳಿ ನಡೆಸಿದ್ದರು.

ಆ ವೇಳೆ ನಕಲಿ ಮತದಾರರ ಗುರುತಿನ ಚೀಟಿ, ಆಧಾರ್‌ ಕಾರ್ಡ್‌, ಡ್ರೈವಿಂಗ್‌ ಲೈಸೆನ್ಸ್‌ ಮತ್ತು ಪಾನ್‌ ಕಾರ್ಡ್‌ ಗಳು ಪತ್ತೆಯಾಗಿದ್ದವು. ಮಾಲೀಕ ಮೌನೇಶ್‌ ಕುಮಾರ್‌, ಭಗತ್‌ ಹಾಗೂ ರಾಘವೇಂದ್ರ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ನೋಟಿಸ್‌ ನೀಡಿ ವಿಚಾರಣೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿತ್ತು. ಈ ಬಗ್ಗೆ ಚುನಾವಣಾಧಿಕಾರಿಗಳು (ಇಆರ್‌ ಒ) ವರದಿ ಕೊಟ್ಟಿದ್ದು, ಅದರ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ.

ಹಿಂದಿನ ಲೇಖನಜಮೀನು, ನಿವೇಶನ ವಿಚಾರದಲ್ಲಿ ಸಂಬಂಧಿಗಳ ನಡುವೆ ಮಾರಾಮಾರಿ: ಹಲವರಿಗೆ ಗಾಯ
ಮುಂದಿನ ಲೇಖನಶಿವಮೊಗ್ಗ ವಿಮಾನ ನಿಲ್ದಾಣದಿಂದ ಸಂಜೆ ವೇಳೆಯೂ ವಿಮಾನ ಹಾರಾಟ ಆರಂಭ