ಪತಿಯ ಕುಟುಂಬದ ಸದಸ್ಯರ ವಿರುದ್ಧ ಪತ್ನಿ ಅತ್ಯಾಚಾರ ಮತ್ತು ವರದಕ್ಷಿಣೆ ಕಿರುಕುಳದ ಸುಳ್ಳು ಆರೋಪ ಮಾಡುವುದು ಪರಮ ಕ್ರೌರ್ಯಕ್ಕೆ ಸಮ, ಇದಕ್ಕೆ ಕ್ಷಮೆ ಇಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ.
ತನ್ನ ಗಂಡನ ವಿರುದ್ಧ ಹೆಂಡತಿ ಮಾಡುವ ಇಂತಹ ಸುಳ್ಳು ದೂರುಗಳು ಮಾನಸಿಕ ಕ್ರೌರ್ಯವನ್ನು ನಿರೂಪಿಸಲಿದ್ದು ಇದರ ಆಧಾರದಲ್ಲಿ ಪತಿ ವಿಚ್ಛೇದನ ಪಡೆಯಬಹುದು ಎಂದು ನ್ಯಾಯಮೂರ್ತಿಗಳಾದ ಸುರೇಶ್ ಕುಮಾರ್ ಕೈತ್ ಮತ್ತು ನೀನಾ ಬನ್ಸಾಲ್ ಕೃಷ್ಣ ಅವರಿದ್ದ ವಿಭಾಗೀಯ ಪೀಠ ತಿಳಿಸಿತು.
“ವರದಕ್ಷಿಣೆ ಕಿರುಕುಳ ಮಾತ್ರವಲ್ಲದೆ, ಪ್ರತಿವಾದಿಯ ಕುಟುಂಬದ ಸದಸ್ಯರ ವಿರುದ್ಧ ಮಾಡಲಾದ ಅತ್ಯಾಚಾರದ ಗಂಭೀರ ಆರೋಪಗಳು ಸುಳ್ಳು ಎಂದು ಕಂಡುಬಂದಿದ್ದು ಇದು ಅತ್ಯಂತ ಕ್ರೌರ್ಯದ ಕೃತ್ಯವಾಗಿದೆ. ಇದನ್ನು ಯಾವುದೇ ರೀತಿಯಲ್ಲೂ ಕ್ಷಮಿಸಲು ಸಾಧ್ಯವಿಲ್ಲ … ಅಂತಿಮವಾಗಿ ಇಂತಹ ಆರೋಪಗಳು ಅಸಮರ್ಥವಾದವು ಮತ್ತು ಆಧಾರರಹಿತ ಎಂದು ಕಂಡುಬಂದರೆ ಪತಿ ತನ್ನ ಮೇಲೆ ಮಾನಸಿಕ ಕ್ರೌರ್ಯ ನಡೆದಿದೆ ಎಂದು ಆರೋಪಿಸಿ ಅದರ ಆಧಾರದ ಮೇಲೆ ವಿಚ್ಛೇದನ ಕೋರಬಹುದು” ಎಂದು ನ್ಯಾಯಾಲಯ ವಿವರಿಸಿದೆ.
ವಿಚ್ಛೇದನ ಕೋರಿದ್ದ ಪತಿಯ ಮನವಿಯನ್ನು ಕೌಟುಂಬಿಕ ನ್ಯಾಯಾಲಯ ಪುರಸ್ಕರಿಸಿತ್ತು. ಇದನ್ನು ಪತ್ನಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಪತ್ನಿಯು ಪತಿಯೊಂದಿಗೆ ಜೀವಿಸಲು ನಿರಾಕರಿಸುತ್ತಿದುದಕ್ಕೆ ಸಾಕಷ್ಟು ಆಧಾರಗಳಿವೆ ಎಂದಿರುವ ಅದು ಒಬ್ಬ ಸಂಗಾತಿಯನ್ನು ಪರಸ್ಪರರ ಸಹವಾಸದಿಂದ ವಂಚಿತಗೊಳಿಸುವುದು ಕೂಡ ತೀವ್ರ ಕ್ರೌರ್ಯದ ಕೃತ್ಯ ಎಂಬುದಾಗಿ ತಿಳಿಸಿತು.