ಬಳ್ಳಾರಿ: ಕೌಟುಂಬಿಕ ಕಲಹದಿಂದ ಬೇಸತ್ತು ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬಳ್ಳಾರಿ ತಾಲೂಕಿನ ಮೋಕಾ ಎಂಬಲ್ಲಿ ನಡೆದಿದೆ.
ಲಕ್ಷ್ಮೀ ಬಳ್ಳಾರಿ ತಾಲೂಕಿನ ಗುಗ್ಗರಟ್ಟಿ ಗ್ರಾಮದ ನಿವಾಸಿಲಕ್ಷ್ಮೀ ಎಂಬಾಕೆ ಇಬ್ಬರು ಮಕ್ಕಳೊಂದಿಗೆ ತುಂಗಭದ್ರಾ ಎಲ್’ಎಲ್’ಸಿ ಕಾಲುವೆಗೆ ಹಾರಿದ್ದಾರೆ. ಈ ವೇಳೆ ಕುರಿ ಕಾಯುತ್ತಿದ್ದ ಆನಂದ್ ಹಾಗೂ ಮತ್ತಿತರರು ನಾಲ್ಕು ವರ್ಷದ ಮಗಳು ವೆನಿಲಾಳನ್ನು ರಕ್ಷಣೆ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಇವರಿಗೆ 16 ವರ್ಷದ ಹಿಂದೆ ಗುಗ್ಗರಟ್ಟಿ ನಿವಾಸಿ ವೀರಭದ್ರ ಎಂಬವರ ಮದುವೆಯಾಗಿತ್ತು. ದಂಪತಿಗೆ ನಾಲ್ಕು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗು ಹುಟ್ಟಿಲ್ಲ, ಹೆಣ್ಣುಮಕ್ಕಳೇ ಜನಿಸಿದ್ದಾರೆ ಎಂಬ ಕಾರಣಕ್ಕೆ ಪ್ರತಿದಿನ ಪತಿ ವೀರಭದ್ರ ಜಗಳವಾಡುತ್ತಿದ್ದ ಎಂದು ಹೇಳಲಾಗಿದೆ.
ಇದರಿಂದ ಬೇಸತ್ತು ಲಕ್ಷ್ಮೀ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಲುವೆ ಬಳಿ ಕುರಿ ಕಾಯುತ್ತಿದ್ದ ಆನಂದ ಮತ್ತು ಮತ್ತಿತರರು ಇವರನ್ನು ಗಮನಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ಷಣೆ ಮಾಡಲು ಮುಂದಾಗಿದ್ದಾರೆ. ಆದ್ರೆ ನಾಲ್ಕು ವರ್ಷದ ಮಗುವೊಂದನ್ನೇ ಅವರು ರಕ್ಷಿಸಲು ಸಾಧ್ಯವಾಗಿದೆ.
ಈ ಘಟನೆ ಕುರಿತು ಸ್ಥಳೀಯರು ಮೋಕ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಮಗುವನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಲಕ್ಷ್ಮೀ ಮತ್ತು ಶಾಂತಿಯ ದೇಹಕ್ಕಾಗಿ ಹುಡುಕಾಟ ಕಾರ್ಯ ನಡೆಸುತ್ತಿದ್ದಾರೆ. ಲಕ್ಷ್ಮೀ ಮತ್ತು ಆಕೆಯ ಎರಡು ವರ್ಷದ ಮಗು ಪತ್ತೆಯಾಗಿಲ್ಲ.
ಮೋಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














