ಬೆಂಗಳೂರು: ಕೌಟುಂಬಿಕ ವಿಚಾರಕ್ಕೆ ಪತಿಯು ಪತ್ನಿಯನ್ನು ಸುತ್ತಿಗೆಯಿಂದ ಹೊಡೆದು ಕೊಲೆಗೈದಿರುವ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ.
ಕರೆಕಲ್ಲು ನಿವಾಸಿ ಚಿಕ್ಕತಾಯಮ್ಮ(44) ಮೃತ ಮಹಿಳೆ. ಆರೋಪಿ ಪತಿ ನಾಗರತ್ನಂ(50) ಅನ್ನು ಬಂಧಿಸಲಾಗಿದೆ.
ತಮಿಳುನಾಡು ಮೂಲದ ನಾಗರತ್ನಂ 35 ವರ್ಷಗಳ ಹಿಂದೆ ಚಿಕ್ಕತಾಯಮ್ಮರನ್ನು ಮದುವೆಯಾಗಿದ್ದು, ಮೂವರು ಮಕ್ಕಳು ಇದ್ದಾರೆ. ಅವರಿಗೂ ಈಗಾಗಲೇ ಮದುವೆಯಾಗಿದ್ದು, ಇಬ್ಬರು ಪ್ರತ್ಯೇಕವಾಗಿ ವಾಸವಾಗಿದ್ದು, ಮತ್ತೂಬ್ಬ ಮಗ ರಾಜು ತಂದೆ, ತಾಯಿ ಜತೆ ಕರೆಕಲ್ಲುನಲ್ಲಿ ವಾಸವಾಗಿದ್ದಾರೆ. ರಾಜು ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಪೊಲೀಸರು ಹೇಳಿದರು.
ಇನ್ನು ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡಿಕೊಂಡಿದ್ದ ನಾಗರತ್ನಂ ಪ್ರತಿ ನಿತ್ಯ ಕುಡಿದು ಮನೆಗೆ ಬರುತ್ತಿದ್ದ. ಕೌಟುಂಬಿಕ ವಿಚಾರವಾಗಿ ಪತ್ನಿ ಜತೆ ಜಗಳವಾಡುತ್ತಿದ್ದ. ಗುರುವಾರ ಸಂಜೆ ರಾಜು ಕಾರ್ಖಾನೆ ಕೆಲಸಕ್ಕೆ ಹೋಗಿದ್ದಾರೆ. ಹೀಗಾಗಿ ಮನೆಯಲ್ಲಿ ಚಿಕ್ಕತಾಯಮ್ಮ ಒಬ್ಬರೇ ಇದ್ದರು. ರಾತ್ರಿ 9 ಗಂಟೆ ಸುಮಾರಿಗೆ ನಾಗರತ್ನಂ ಕುಡಿದು ಮನೆಗೆ ಬಂದು, ಪತ್ನಿ ಜತೆ ಜಗಳವಾಡಿದ್ದಾನೆ. ಅದು ವಿಕೋಪಕ್ಕೆ ಹೋದಾಗ, ಸುತ್ತಿಗೆಯಿಂದ ಪತ್ನಿ ಚಿಕ್ಕತಾಯಮ್ಮನ ಹಣೆ, ಮುಖ ಹಾಗೂ ಇತರೆ ಭಾಗಗಳಿಗೆ ಬಲವಾಗಿ ಹೊಡೆದು ಕೊಲೆಗೈದು ತಮಿಳುನಾಡಿಗೆ ಪರಾರಿಯಾಗಿದ್ದ. ಅವರ ಮನೆ ಪಕ್ಕದಲ್ಲೇ ವಾಸವಿದ್ದ ರಾಜು ಅವರ ದೊಡ್ಡಪ್ಪನ ಪುತ್ರ ಕಾರ್ತಿಕ್, ರಾಜುಗೆ ಕರೆ ಮಾಡಿ ‘ನಿಮ್ಮ ತಂದೆ-ತಾಯಿ ಗಲಾಟೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೂಡಲೇ ರಾಜು ಮನೆಗೆ ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ರಾಜು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಶುಕ್ರವಾರ ಬೆಳಗ್ಗೆಯೇ ಆರೋಪಿಯನ್ನು ತಮಿಳುನಾಡಿನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.