ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಯಾರನ್ನಾದರೂ ಖರೀದಿ ಮಾಡಬಹುದು. ಆ ಸಾಮರ್ಥ್ಯ ಅವರಿಗಿದೆ. ಆದರೆ, ದೇವೇಗೌಡರ ಕುಟುಂಬವನ್ನು ಖರೀದಿ ಮಾಡಲಾಗದು ಎಂದು ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ಶಿವಕುಮಾರ್ ಮನಸ್ಸು ಮಾಡಿದರೆ ಕೇಂದ್ರದ ಬಿಜೆಪಿ ನಾಯಕರನ್ನೇ ಖರೀದಿ ಮಾಡಿದರೂ ಅಚ್ಚರಿ ಇಲ್ಲ ಎಂದರು.
ಜೆಡಿಎಸ್ ಶಾಸಕರನ್ನು ಕಾಂಗ್ರೆಸ್ ಸೆಳೆಯುತ್ತಿದೆ ಎನ್ನುವ ಸುದ್ದಿ ನಿಜವಲ್ಲ. ಯಾವ ಶಾಸಕರೂ ಪಕ್ಷ ತೊರೆಯುವುದಿಲ್ಲ. ಈ ರೀತಿಯ ಚರ್ಚೆ ಹುಟ್ಟು ಹಾಕಿದ ಕಾಂಗ್ರೆಸ್ ನ 30 ಶಾಸಕರು ಪಕ್ಷ ತೊರೆಯಲು ಮುಂದಾಗಿದ್ದಾರೆ. ಅವರನ್ನು ಹಿಡಿತದಲ್ಲಿ ಇಟ್ಟುಕೊಳ್ಳಲು ಸಾಧ್ಯವಾಗದೆ ಬೇರೆ ಪಕ್ಷಗಳ ಶಾಸಕರ ವಿರುದ್ಧ ಸುದ್ದಿ ಹಬ್ಬಿಸುತ್ತಿದ್ದಾರೆ ಎಂದರು.