ಅಯೋಧ್ಯೆ: ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು, ಅವರ ಧರ್ಮಪತ್ನಿ ಶ್ರೀಮತಿ ಚನ್ನಮ್ಮನವರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಹಾಗೂ ರಾಜ್ಯ ಯುವ ಜನತಾದಳ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಇಂದು ಅಯೋಧ್ಯೆಯಲ್ಲಿ ನಡೆದ ಶ್ರೀರಾಮ ಮಂದಿರ ಲೋಕಾರ್ಪಣೆ ಹಾಗೂ ಶ್ರೀ ಬಾಲರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದಲ್ಲಿ ಭಾಗಿಯಾದರು.
ಅತಿ ಗಣ್ಯರ ಗ್ಯಾಲರಿಯಲ್ಲಿ ಆಸೀನರಾಗಿದ್ದ ಮಾಜಿ ಪ್ರಧಾನಿಗಳ ಕುಟುಂಬದವರು ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಹಾಗೂ ಭವ್ಯ ಶ್ರೀರಾಮ ಮಂದಿರವನ್ನು ಕಣ್ತುಂಬಿಕೊಂಡರು.
ಪ್ರಾಣ ಪ್ರತಿಷ್ಠಾಪನೆ ಮುಗಿದ ನಂತರ ಗಣ್ಯರಿಗೆ ಶುಭ ಕೋರಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ದೇವೇಗೌಡರಿಗೆ ಧನ್ಯವಾದ ಹೇಳಿದರು. ಇದಕ್ಕೆ ಪ್ರತಿಯಾಗಿ ದೇವೇಗೌಡರು, ಕುಮಾರಸ್ವಾಮಿ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಪ್ರಧಾನಿಗಳಿಗೆ ಅಭಿವಂದನೆ ಸಲ್ಲಿಸಿದರು.
ಇದೇ ವೇಳೆ ರಾಜ್ಯದಿಂದ ಅಯೋಧ್ಯಗೆ ತೆರಳಿದ್ದ ಗಣ್ಯರು, ದೇಶದ ನಾನಾ ಭಾಗಗಳಿಂದ ಆಗಮಿಸಿದ್ದ ಗಣ್ಯಾತಿಗಣ್ಯರು ಮಾಜಿ ಪ್ರಧಾನಿಗಳು ಆಸೀನರಾಗಿದ್ದ ಜಾಗಕ್ಕೆ ಬಂದು ಕುಶಲೋಪರಿ ವಿಚಾರಿಸಿದರು. ಪ್ರಾಣ ಪ್ರತಿಷ್ಠೆ ಕಾರ್ಯಕ್ರಮದ ನಂತರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೂ ಮಾಜಿ ಪ್ರಧಾನಿಗಳು, ಮಾಜಿ ಮುಖ್ಯಮಂತ್ರಿ ಅವರು ಶುಭ ಕೋರಿದರು. ಈ ಸಂದರ್ಭದಲ್ಲಿ ಮಾಜಿ ಪ್ರಧಾನಿಗಳ ಕುಟುಂಬದೊಂದಿಗೆ ಮಾಜಿ ಸಂಸದ ಕುಪೇಂದ್ರ ರೆಡ್ಡಿ ಅವರು ಇದ್ದರು.
ಅಯೋಧ್ಯೆಯಲ್ಲಿಯೇ ನಿಖಿಲ್ ಅವರ ಜನ್ಮದಿನ:
ನಿಖಿಲ್ ಕುಮಾರಸ್ವಾಮಿ ಅವರು ಅಯೋಧ್ಯೆಯಲ್ಲಿಯೇ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಬೆಳಗ್ಗೆಯೇ ತಾವು ತಂಗಿದ್ದ ಹೋಟೆಲ್ ನಲ್ಲಿಯೇ ಜನ್ಮದಿನ ಆಚರಿಸಿಕೊಂಡ ಅವರು, ತಮ್ಮ ತಾತನವರಾದ ದೇವೇಗೌಡರು, ಅಜ್ಜಿಯವರಾದ ಶ್ರೀಮತಿ ಚನ್ನಮ್ಮನವರು ಹಾಗೂ ತಂದೆಯವರಾದ ಹೆಚ್.ಡಿ.ಕುಮಾರಸ್ವಾಮಿ ಅವರ ಆಶೀರ್ವಾದ ಪಡೆದುಕೊಂಡರು. ಶ್ರೀ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ನನ್ನ ಜನ್ಮದಿನ ಬಂದಿದ್ದು, ಅದೂ ಅಯೋಧ್ಯೆಯ ರಾಮ ಸನ್ನಿಧಿಯಲ್ಲೇ ಆಚರಿಸಿಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಸುಕೃತವೇ ಸರಿ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದ್ದಾರೆ.