ಹಾಸನ: ದೇವೇಗೌಡರ ಕುಟುಂಬ ಎಂದರೆ ಹುಡುಗಾಟ ಅಲ್ಲ. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲು ನಮ್ಮ ಕುಟುಂಬದವರು ಒಂದಾಗಿದ್ದೇವೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಟುಂಬ ರಾಜಕಾರಣದ ಆರೋಪ ಮಾಡುತ್ತಾರಲ್ಲ, ಈಗ ನಮ್ಮ ಕುಟುಂಬ ಒಂದಾಗಿ ಪಕ್ಷದ ಗೆಲುವಿಗೆ ಶ್ರಮಿಸುತ್ತಿದೆ ಎಂದರು.
ಕಳೆದ ಬಾರಿ ಕೂಡ ಬಿಜೆಪಿ ಗೆಲ್ಲುವ ಹಂತದಲ್ಲಿ ಇರಲ್ಲಿಲ್ಲ. ರಾಹುಲ್ ಗಾಂಧಿ ಬಾಯಲ್, ಜೆಡಿಎಸ್ ಪಕ್ಷ ಬಿಜೆಪಿ ಬಿ ಟೀಂ ಎಂದು ಹೇಳಿರುವ ಮೂಲಕ ಕಾಂಗ್ರೆಸ್ ನವರು ಬಿಜೆಪಿಯನ್ನು ಹಾಸನದಲ್ಲಿ ಗೆಲ್ಲಿಸಿದ್ದರು. ಕಳೆದ ಬಾರಿ ಬಿಜೆಪಿ ಗೆಲುವು ಆಕಸ್ಮಿಕ ಎಂದರು.
ಹಾಸನ ಕ್ಷೇತ್ರದ ಬಗ್ಗೆ ಎದುರಾಳಿಗಳು ಲಘುವಾಗಿ ಮಾತನಾಡಿದ್ದಾರೆ. ಅದಕ್ಕೆ ಇಂದು ಪಕ್ಷದ ಕಾರ್ಯಕರ್ತರು ಉತ್ತರ ನೀಡುತ್ತಿದ್ದಾರೆ. ಯಾರು ಎಷ್ಟೇ ದುಡ್ಡು ಖರ್ಚು ಮಾಡಲಿ, ಹಾಸನ ಕ್ಷೇತ್ರದಲ್ಲಿ ಈ ಬಾರಿ ಜೆಡಿಎಸ್ ಅಭ್ಯರ್ಥಿ 25 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಹೇಳಿದರು.
ಪ್ರೀತಂ ಗೌಡರು ಹೊಳೆನರಸೀಪುರದಿಂದ ಸ್ಪರ್ಧೆ ಮಾಡುವ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಎಲ್ಲರೂ, ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶವಿದೆ. ಅದು ಅವರ ಪಕ್ಷದ ನಿರ್ಧಾರ. ಆ ಬಗ್ಗೆ ನಾವು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದರು.














